ಅನಧಿಕೃತ ಶಾಲೆ ಮುಚ್ಚಲು ಮೇ 25ರ ಡೆಡ್‌ಲೈನ್
ಬೆಂಗಳೂರು: ರಾಜ್ಯದಲ್ಲಿನ ಅನಧಿಕೃತ ಶಾಲೆಗಳನ್ನು ಮುಚ್ಚಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೇ 25ರವರೆಗೆ ಗಡುವು ನೀಡಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು. ದೂರುಗಳು ಬಂದರೂ, ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಬಾರದು.
ಪಟ್ಟಿಯನ್ನು ಒದಗಿಸಿದರೆ ಪೋಷಕರಿಗೂ ಅನುಕೂಲವಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು ಪೋಷಕರು ಶಾಲಾ ಪೂರ್ವಾಪರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ಶಿಕ್ಷಣ ಇಲಾಖೆಯನ್ನು ಆಗ್ರಹಿಸಿತ್ತು.
ಅನಧಿಕೃತ ಶಾಲೆಗಳು 2023–24ರ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ದಾಖಲು ಮಾಡಿಕೊಳ್ಳಬಾರದು. ನೋಂದಣಿ ಮಾಡಿಕೊಂಡ ಶಾಲೆಗಳು ಯಾವ ಪಠ್ಯಕ್ರಮದ ಬೋಧನೆಗೆ ಅನುಮತಿ ಪಡೆಯಲಾಗಿದೆಯೋ ಅದೇ ಪಠ್ಯಕ್ರಮ ಬೋಧನೆ ಮಾಡಬೇಕು. ಅನುಮತಿ ಪಡೆದಷ್ಟೇ ಮಾಧ್ಯಮ, ವಿಭಾಗಗಳನ್ನು ನಡೆಸಬೇಕು. ಇಲಾಖೆ ಪೂರ್ವಾನುಮತಿ ಇಲ್ಲದೇ ಶಾಲೆಗಳನ್ನು ಸ್ಥಳಾಂತರ ಮಾಡಬಾರದು. ಕರ್ನಾಟಕ ಪಠ್ಯಪುಸ್ತಕ ಸಂಘ ಸರಬರಾಜು ಮಾಡುವ ಪಠ್ಯಪುಸ್ತಕಗಳನ್ನೇ ಖರೀದಿ ಮಾಡಬೇಕು. ಮೇ 25ರ ನಂತರ ರಾಜ್ಯದಲ್ಲಿ ಅನಧಿಕೃತ ಶಾಲೆಗಳು ಪತ್ತೆಯಾದರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಸಿದೆ.