ವಿವಿಧ ಬೇಡಿಕೆ ಈಡೆರಿಸುವಂತೆ ಸಚಿವ ಎ ನಾರಾಯಣಸ್ವಾಮಿಗೆ ಮನವಿ ಸಲ್ಲಿಸಿದ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘ

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಸ್ವಚ್ಛತಾ ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಚ್.ಹುಲಿಗೇಶ್ ಮಾತನಾಡಿ, ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸಫಾಯಿ ಕರ್ಮಚಾರಿ ಕುಟುಂಬಗಳಿದ್ದು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಅಭಿವೃದ್ಧಿ ನಿಗಮ ಕಳೆದ ಇಪ್ಪತ್ತು ವರ್ಷಗಳಿಂದ ಹಲವು ಯೋಜನೆಗಳಿದ್ದರೂ ಈವರೆಗೂ ಸಮಪರ್ಕವಾಗಿ ಜಾರಿಯಾಗುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಪಡೆಯುವ ಹಕ್ಕು ಪ್ರತಿಯೊಬ್ಬ ಭಾರತೀಯ ಸಫಾಯಿ ಕರ್ಮಚಾರಿ ಕುಟುಂಬಕ್ಕಿದ್ದು, ರಾಜ್ಯದಲ್ಲಿ ಕೇಂದ್ರದ ಯೋಜನೆಗಳನ್ನು ಕಳೆದ ಐದಾರು ವರ್ಷಗಳಿಂದ ಜಾರಿ ಮಾಡುತ್ತಿಲ್ಲ. ಇದರಿಂದ ದೇಶದ ಕಟ್ಟಕಡೆಯ ವರ್ಗ ಎಂದು ಗುರುತಿಸಿರುವ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಅನ್ಯಾಯವಾಗಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡಿದ್ದು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವಿಷಾದಿಸಿದರು.
ಆರ್‌ಟಿಇ ಯೋಜನೆಯಲ್ಲಿ ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಪ್ರತಿಷ್ಠಿತ ಶಾಲೆಗಳ ಪ್ರವೇಶಾತಿಯಲ್ಲಿ ಮಕ್ಕಳಿಗೆ ಆದ್ಯತೆ ನೀಡಬೇಕು, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಲ್ಲಿ ಜಾರಿಯಲ್ಲಿರುವ ಆರ್ಥಿಕ ಯೋಜನೆಗಳಲ್ಲಿ ಸಹಾಯಧ ಒದಗಿಸಬೇಕು, ರಾಜ್ಯದ ವಸತಿ ಯೋಜನೆಗಳಲ್ಲಿ ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ವಿಶೇಷವಾಗಿ ಪರಿಗಣಿಸಿ ವಸತಿ ಸೌಲಭ್ಯ ಕಲ್ಪಿಸುವುದು, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಅಭಿವೃದ್ಧಿ ನಿಗಮದ ಯೋಜನೆಗಳನ್ನು ಕರ್ನಾಟಕ ರಾಜ್ಯದಲ್ಲಿ ಮರು ಜಾರಿ ಮಾಡುವ ಮೂಲಕ ರಾಜ್ಯದ ಸಫಾಯಿ ಕರ್ಮಚಾರಿ ಕುಟುಂಬಗಳ ಆರ್ಥಿಕ, ಶೈಕ್ಷಣಿಕ ಪ್ರಗತಿ ಹೊಂದಲು ಸಹಕಾರ ನೀಡಬೇಕೆಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಪಂಜು ಪೈಲ್ವಾನ್, ಹರೀಶ್, ಸಂತೋಷ್, ಹನುಮಂತ ಇದ್ದರು.