ಸುವರ್ಣ ಸೌಧದ ಬಳಿ ಸಸಿ ನೆಟ್ಟು ಪ್ರಕೃತಿ ಪ್ರೇಮ ಮೆರೆದ ಶಾಸಕ
ಬೆಳಗಾವಿ: ಪರಿಸರ ಕಾಳಜಿಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜು ವಿ ಶಿವಗಂಗಾ ರವರು ಬೆಳಗಾವಿಯ ಸುವರ್ಣ ವಿಧಾನಸೌಧದ ಹೊರ ಆವರಣದಲ್ಲಿ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರು ಸಿಂಪಡಿಸಿ ಸಂತಸಪಟ್ಟರು.
ಸರ್ಕಾರಿ ನರ್ಸರಿಯಿಂದ ಸಸಿಗಳನ್ನು ಆಯ್ಕೆ ಮಾಡಿ ಸುವರ್ಣ ವಿಧಾನಸೌಧದ ಬಳಿ ಇರುವ ಜಾಗದಲ್ಲಿ ಸಸಿಗಳನ್ನು ನೆಡಲು ಸ್ಥಳ ಗುರುತಿಸಿದ್ದು, ಪ್ರತಿ ಸಸಿಯು ಶಾಸಕರ ಹೆಸರಿನೊಂದಿಗೆ ಸೊಗಸಾದ ವಿನ್ಯಾಸದ ಫಲಕ ಹೊಂದಿದೆ. ಹಲವು ವರ್ಷಗಳ ಬಳಿಕ ಬಂದು ಈ ಸಂದರ್ಭವನ್ನು ನೆನಪಿಸಿಕೊಳ್ಳಬಹುದಾಗಿದೆ.
ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಿರುವ ಜಂಟಿ ವಿಧಾನಮಂಡಲದ ಅಧಿವೇಶನದಲ್ಲಿ ಹಾಗೂ ಸದನದ ಕಾರ್ಯಕಲಾಪಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ತಾಲ್ಲೂಕಿನ ಸಮಸ್ಯೆಗಳನ್ನು ಪರಿಹರಿಸಲು ಅಭಿವೃದ್ಧಿಯ ಬಗ್ಗೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಸಚಿವರುಗಳು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವುದು ಶ್ಲಾಘನೀಯ.
ಈ ಸಂದರ್ಭದಲ್ಲಿ ರಾಣೇಬೆನ್ನೂರು ಕ್ಷೇತ್ರದ ಶಾಸಕ ಶ್ರೀ ಪ್ರಕಾಶ್ ಕೋಳಿವಾಡ, ಶಿರಸಿ ಕ್ಷೇತ್ರದ ಶಾಸಕ ಶ್ರೀ ಭೀಮಣ್ಣ, ಹಡಗಲಿ ಕ್ಷೇತ್ರದ ಶಾಸಕ ಶ್ರೀ ಕೃಷ್ಣಾನಾಯ್ಕ್, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಟ್, ಚಿಕ್ಕಮಗಳೂರು ಕ್ಷೇತ್ರದ ಶಾಸಕ ತಮ್ಮಣ್ಣ, ಹುಮನಾಬಾದ್ ಕ್ಷೇತ್ರದ ಶಾಸಕ ಸಿದ್ದು ಪಾಟೀಲ್, ಗುರುಮಿಟಕಲ್ ಕ್ಷೇತ್ರದ ಶಾಸಕ ಶರಣ್ ಗೌಡ ಕಂದಕೂರ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.