ಗಾಂಧಿನಗರ ಅಖಾಡದಲ್ಲಿ ಕೌತುಕ: ಕೃಷ್ಣಯ್ಯ ಶೆಟ್ಟಿ ಪರ ಕ್ರಿಶ್ಚಿಯನ್ ರಣವ್ಯೂಹ.

ಗಾಂಧಿನಗರ ಅಖಾಡದಲ್ಲಿ ಕೌತುಕ: ಕೃಷ್ಣಯ್ಯ ಶೆಟ್ಟಿ ಪರ ಕ್ರಿಶ್ಚಿಯನ್ ರಣವ್ಯೂಹ.

ಬೆಂಗಳೂರು: ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವಂತೆಯೇ ಗಾಂಧಿನಗರ ವಿಧಾನಸಭಾ ಕ್ಷೇತ್ರ ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯ ರಾಜಧಾನಿಯ ಕೇಂದ್ರಸ್ಥಾನವಾಗಿರುವ ಈ ಕ್ಷೇತ್ರ ಬೆಂಗಳೂರಿಗೆ ಭೇಟಿ ನೀಡುವ ಜನರನ್ನು ಬರಮಾಡಿಕೊಳ್ಳುವ ನಾಡಾಗಿದ್ದರೂ ಪ್ರಸ್ತುತ ಅಭಿವೃದ್ಧಿ ವಿಚಾರವನ್ನು ಗಮನಿಸಿದರೆ ಅಲ್ಲಿನ ಪರಿಸ್ಥಿತಿ ಮಾತ್ರ ವ್ಯತಿರಿಕ್ತವಾಗಿದೆ. ಹಾಗಾಗಿ ಭಾರೀ ಬದಲಾವಣೆಯ ನಿರೀಕ್ಷೆಯಲ್ಲಿರುವ ಕ್ಚೇತ್ರದ ಮಂದಿ ಇದೀಗ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ಕರೆತಂದು ಬಿಜೆಪಿ ಹುರಿಯಾಳಾಗಿಸುವ ಉತ್ಸಾಹದಲ್ಲಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ‘ದೇವರ ಮಂತ್ರಿ’ ಎಂದೇ ಗುರುತಾಗಿರುವ ಕೃಷ್ಣಯ್ಯ ಶೆಟ್ಟಿ ಅವರು ಗಾಂಧೀನಗರದಲ್ಲೇ ಬೀಡು ಬಿಟ್ಟಿದ್ದು ನಿರಂತರ ಸಾಮಾಜಿಕ, ಧಾರ್ಮಿಕ ಕೈಂಕರ್ಯ ಮೂಲಕ ಕ್ಷೇತ್ರದ ಜನರಿಗೆ ಸಮೀಪವಾಗಿದ್ದಾರೆ. ದಶಕದ ಹಿಂದೆ ಮುಜರಾಯಿ ಸಚಿವರಾಗಿದ್ದಾಗ ಅನುಸರಿಸಿದ ‘ಗಂಗಾಜಲ ಮೇನಿಯಾ’, ‘ವೈಕುಂಠ ಲಡ್ಡು’ ಸಹಿತ ವಿವಿಧ ದೈವೀ ಕೈಂಕರ್ಯಗಳು ಹಾಗೂ ಮಹೋತ್ಸವಗಳ ಆಯೋಜನೆ ಮೂಲಕ ಆಸ್ತಿಕ ಸಮುದಾಯದ ಕೇಂದ್ರ ಬಿಂದುವಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರು ‘ದೇವರ ಮಂತ್ರಿ’ ಎಂದೇ ಗುರುತಾಗಿದ್ದರು. ಇದೀಗ ಇವರು ಬೆಂಗಳೂರಿನ ಕೇಂದ್ರ ಸ್ಥಾನವಾಗಿರುವ ಗಾಂಧಿನಗರದತ್ತ ಚಿತ್ತ ನೆಟ್ಟಿರುವುದೇ ಕುತೂಹಲಕಾರಿ ಸಂಗತಿ.

ಕೃಷ್ಣಯ ಶೆಟ್ಟಿಯನ್ನು ಆಲಿಂಗಿಸಿದ ಕ್ರೈಸ್ತ ಸಮುದಾಯ: 
ಆರೆಸ್ಸೆಸ್ ಸಿದ್ದಾಂತದ ಕೃಷ್ಣಯ್ಯ ಶೆಟ್ಟಿ ಅವರಿಗೆ ಗಾಂಧಿನಗರದ ಕ್ಷೇತ್ರದ ಪ್ರಬಲ ಸಮುದಾಯಗಳಲ್ಲೊಂದಾದ ಕ್ರೈಸ್ತರೂ  ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ‘ಕ್ರಿಶ್ಚಿಯನ್ ಸೇವಾ ಸಂಘ’ದ ಪ್ರಮುಖರು ಶನಿವಾರ ಕೃಷ್ಣಯ್ಯ ಶೆಟ್ಟಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಗಾಂಧಿನಗರದ ಬಹುತೇಕ ಸ್ಲಂ ಪ್ರದೇಶಗಳಲ್ಲಿ ಕ್ರೈಸ್ತರೇ ಹೆಚ್ಚಿದ್ದಾರೆ. ಈ ವರೆಗೂ ಈ ಕ್ಷೇತ್ರದಿಂದ ಆಯ್ಕೆಯಾಗಿರುವವರು ಸ್ಲಂ ಬಗ್ಗೆಯಾಗಲೀ ಕ್ರೈಸ್ತರ ಬಗ್ಗೆಯಾಗಲೀ ಗಮನಹರಿಸಿಲ್ಲ ಎಂಬುದು ಸಮುದಾಯದ ಮುಖಂಡರ ಅಭಿಪ್ರಾಯ. ರಾಜಕೀಯವಾಗಿ ಯಾವುದೇ ಪಕ್ಷದೊಂದಿಗೆ ಗಾಂಧಿನಗರದ ಕ್ರೈಸ್ತ ಬಂಧುಗಳು ಗುರುತಿಸಿಕೊಳ್ಳದಿದ್ದರೂ ತಮ್ಮ ಪ್ರದೇಶದ ಅಭಿವೃದ್ಧಿಯ ನಿರೀಕ್ಷೆ ಇಟ್ಟು ಸ್ಥಳೀಯ ನಾಯಕರ ಒತ್ತಡ ತಂತ್ರಕ್ಕೆ ತಮ್ಮ ಸಮುದಾಯದವರು ತಲೆಬಾಗಿದ್ದರು. ಆದರೆ ಇದೀಗ ತಂತ್ರಜ್ಞಾನ ಯುಗದಲ್ಲೂ ತಾವಿನ್ನೂ ಸ್ಲಂ ವಾಸಿಗಳಾಗಿಯೇ ಉಳಿಯಬೇಕೆ ಎಂಬ ಪ್ರಶ್ನೆ ನಮ್ಮನ್ನು ಕಾಡಿದೆ ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ಭೇಟಿಯಾದ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್, ಕಾರ್ಯದರ್ಶಿ ಕುಮಾರ್, ಅವರನ್ನೊಳಗೊಂಡ ಪ್ರಮುಖರು ಸುದೀರ್ಘ ಮಾತುಕತೆ ನಡೆಸಿದರು. ತಾವು ಗಾಂಧಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಲೇಬೇಕು. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ನಮ್ಮ ಸಮುದಾಯ ಸಂಪೂರ್ಣ ಬೆಂಬಲ ನೀಡಿ ಗೆಲ್ಲಿಸಲಿದೆ ಎಂದು ಕ್ರಿಶ್ಚಿಯನ್ ಸೇವಾ ಸಂಘದ ಪ್ರಮುಖರು ಕೃಷ್ಣಯ್ಯ ಶೆಟ್ಟಿ ಅವರಿಗೆ ಭರವಸೆ ನೀಡಿದರು.
ಗಾಂಧಿನಗರ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮತಗಳು ಗುಪ್ತಗಾಮಿನಿಯಿದ್ದಂತೆ. ಕ್ಯಾಥೊಲಿಕ್, ಸಿಎಸ್ಐ ಹೊರತುಪಡಿಸಿ ಇತರೇ ಕೃಶ್ಚಿಯನರ ಸಂಖ್ಯೆಯೇ 25,000ಕ್ಕೂ ಹೆಚ್ಚಿದೆ. ಇಷ್ಟೂ ಮತಗಳು ಈವರೆಗೂ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಆಗಿತ್ತು. ಇದೀಗ ಕ್ರೈಸ್ತ ಸಮುದಾಯದ ಪ್ರಬಲ ಸಂಘಟನೆಯಾಗಿರುವ ಕ್ರಿಶ್ಚಿಯನ್ ಸೇವಾ ಸಂಘದ ಪ್ರಮುಖರ ನಡೆ ಗಾಂಧಿನಗರ ಕ್ಷೇತ್ರದ ಬೆಳವಣಿಗೆ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

Leave a Reply

Your email address will not be published. Required fields are marked *

error: Content is protected !!