ಬಿಜೆಪಿ ಅಧಿಕಾರಕ್ಕೆ ಬಂದ 7 ವರ್ಷಗಳಲ್ಲಿ ರಸಗೊಬ್ಬರ ಕೊರತೆಯಾಗಿಲ್ಲ – ಸಚಿವ ಭಗವಂತ ಖೂಬಾ
ದಾವಣಗೆರೆ: ತುಷ್ಠೀಕರಣ ರಾಜನೀತಿ ಮತ್ತು ಜಾತಿ ರಾಜಕಾರಣ ಮಾಡುವುದರಲ್ಲಿ ಮಗ್ನರಾಗಿರುವ ಕಾಂಗ್ರೆಸ್‌ಗೆ ದೇಶದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದು ಸಹಿಸಲಾಗುತ್ತಿಲ್ಲ ಎಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಏಳಿಗೆಯಾಗುತ್ತದೆ. ಇದರಿಂದ ದೇಶ ಅಭಿವೃದ್ಧಿ ಹೊಂದುತ್ತದೆ. ಇದು ಕಾಂಗ್ರೆಸ್ ನವರಿಗೆ ಬೇಕಿಲ್ಲ ಎಂದು ಕಿಡಿಕಾರಿದರು.
ಆರ್ ಎಸ್ಎಸ್ ವಿರುದ್ಧ ಹೇಳಿಕೆ ನೀಡುವ ಭರದಲ್ಲಿ ಮಾಜಿ ಸಿಎಂಗಳಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ಮರ್ಯಾದೆ ತಾವೆ ಕಳೆದುಕೊಳ್ಳುತ್ತಿದ್ದಾರಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜಕಾರಣ ಮಾಡುವುದಿದ್ದರೆ ಅನೇಕ ವಿಷಯಗಳಿವೆ. ಆದರೆ, ಆರ್‌ಎಸ್‌ಎಸ್ ಬಗ್ಗೆ ವಿರೋಧ ಹೇಳಿಕೆ ನೀಡಿ ಮುಸ್ಲಿಂ ಓಟು ಪಡೆಯುವ ಅಸ್ತ್ರವಾಗಿ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಹರಿಹಾಯ್ದರು.
ಆರ್ ಎಸ್ಎಸ್ ಒಂದು ದೊಡ್ಡ ಸಂಸ್ಥೆಯಾಗಿದ್ದು, ನಿಸ್ವಾರ್ಥ ಸೇವೆ. ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಅದರ ಬಗ್ಗೆ ಹೀಗೆ ಮಾತನಾಡುತ್ತಾರೆ ಎಂದರೆ ಅವರಿಗೆ ಅನುಭವವಿಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ತಿವಿದರು.
ರಾಷ್ಟ್ರೀಯ ಸ್ವಯಂ ಸೇವಕರ ಸಂಘಟನೆ ಬಗ್ಗೆ ತಿಳಿದುಕೊಳ್ಳುವುದಕ್ಕಾದರೂ ಒಂದೆರಡು ದಿವಸ ಮೂಕಪ್ರೇಕ್ಷಕರಾಗಿ ಅವರು ಅಧ್ಯಾಯನ ಮಾಡಲಿ, ನಂತರದಲ್ಲಿ ಮಾತನಾಡಲಿ. ಅನುಭವವಿಲ್ಲದೇ ಹೀಗೆ ಸಂಘಕ್ಕೆ ಮಾತನಾಡುವುದು ಸರಿಯಲ್ಲ ಎಂದರು.
ಕಮಿಷನ್ ಪಡೆಯುವುದೇ ಕಾಂಗ್ರೆಸ್‌ನಲ್ಲಿರುವ ಎಲ್ಲರ ಸಂಸ್ಕೃತಿ. ಅದನ್ನು ಅವರದ್ದೇ ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಮತ್ತು ಮಾಜಿ ಸಂಸದ ಉಗ್ರಪ್ಪ ಸತ್ಯ ಬಾಯ್ಬಿಟ್ಟಿದ್ದಾರಷ್ಟೆ. ಅವರಿಗೆ ತಮ್ಮ ಪಕ್ಷದ ಬಗ್ಗೆ ಈಗ ಜ್ಞಾನೋದಯವಾಗಿದೆ ಎಂದು ಸಿದ್ದರಾಮಯ್ಯ ಕಮಿಷನ್ ಏಜೆಂಟ್ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯಿದೆ. ಡಿಕೆ ಶಿವಕುಮಾರ್ ಕಂಡರೆ ಸಿದ್ದರಾಮಯ್ಯಗೆ ಆಗಲ್ಲ. ಸಿದ್ದರಾಮಯ್ಯನನ್ನು ಕಂಡರೆ ಡಿಕೆ ಶಿವಕುಮಾರ್‌ಗೆ ಆಗಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಈ ೭ ವರ್ಷಗಳಲ್ಲಿ ಎಂದಿಗೂ ರಸಗೊಬ್ಬರದ ಕೊರತೆಯಾಗಿಲ್ಲ. ಆದರೆ, ಮಧ್ಯವರ್ತಿಗಳ ಹೇಳಿಕೆಯಿಂದ ರಸಗೊಬ್ಬರ ಕೊರತೆಯಾಗುತ್ತದೆ ಎನ್ನುವ ಆತಂಕ ಹುಟ್ಟಿಸುವ ಕಾರ್ಯ ನಡೆಯುತ್ತಿದೆ ಎಂದರು.