ಜನವರಿ 10 ರಂದು ಮಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಲಸಿಕೆ
ದಾವಣಗೆರೆ: ಜಿಲ್ಲೆಯ ವೈದ್ಯಕೀಯ ಸಿಬ್ಬಂದಿಗಳಿಗೆ, ಪೊಲೀಸರು, ಆಶಾಗಳು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಜ.10 ರಂದು ಬೂಸ್ಟರ್ ಲಸಿಕೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಾಗುತ್ತಿದೆ.
ಕರೋನಾ ಮೂರನೇ ಅಲೆ ತಡೆಯಲು ಸರಕಾರ ಇಂತಹ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಇಂದು ರಾಜ್ಯಾದ್ಯಂತ ಅಧಿಕೃತವಾಗಿ ಚಾಲನೆ ಸಿಗಲಿದೆ. ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ನೂರು ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಕೋವಿಡ್ ನಿರೋಧಕ ಲಸಿಕೆ ಪಡೆದು ಈಗಾಗಲೇ 9 ತಿಂಗಳಾಗಿರುವ ವೈದ್ಯ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು, ಆಶಾ ಮತ್ತು ಕಾರ್ಯಕರ್ತರು ಮಾತ್ರವಲ್ಲದೇ ಅರವತ್ತು ವರ್ಷ ಮೇಲ್ಪಟ್ಟ, ವಿವಿಧ ಖಾಯಿಲೆಗಳಿಂದ ಬಳಲುವವರಿಗೆ ಬೂಸ್ಟರ್ ಡೋಸ್ ನೀಡಲು ಆದ್ಯತೆ ಕೊಡಲಾಗಿದೆ.
ಜಿಲ್ಲೆಯಲ್ಲಿ 15,806 ವೈದ್ಯ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಮುಂಚೂಣಿ ವರ್ಕರ್ ಗಳಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆ ನೀಡಲಾಗುವುದು.