ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸಲು ಆರ್ ಬಿ ಐ ನೀಡುತ್ತಿರುವ ಹೊಸ ಆಫರ್!

ಚಿನ್ನದ ಮೇಲಿನ ಹೂಡಿಕೆ ಎಂದಿಗೂ ನಷ್ಟವಾಗುವುದಿಲ್ಲ ಆದ್ದರಿಂದ ಆರ್ಬಿಐ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond Scheme) ಸ್ಕೀಮ್​ನ 9 ನೇ ಆವೃತ್ತಿಗೆ 5 ದಿನಗಳ ಕಾಲ ಚಂದಾದಾರಿಕೆ ಆರಂಭವಾಗುತ್ತಿದೆ.

5 ದಿನಗಳ ಕಾಲಾವಕಾಶ
ಜನವರಿ 10, ಸೋಮವಾರದಿಂದ 5 ದಿನಗಳ ಸಾವರಿನ್ ಗೋಲ್ಡ್ ಬಾಂಡ್​ ಸ್ಕೀಮ್​ನ 9 ನೇ ಆವೃತ್ತಿಗೆ ಚಂದಾದಾರರನ್ನು ಬರಮಾಡಿಕೊಳ್ಳಲು ಆರ್​​ಬಿಐ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜನವರಿ 7, ಶುಕ್ರವಾರ ತಿಳಿಸಿದೆ.

ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು?
ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್​​ 2021- 22 ರ ಈ ಯೋಜನೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯನ್ನು 4,786 ರೂ ಎಂದು ನಿಗದಿಪಡಿಸಲಾಗಿದೆ ಎಂದು ಆರ್​​ಬಿಐ ತಿಳಿಸಿದೆ. ಹೂಡಿಕೆದಾರರು ಈ ಸುವರ್ಣಾವಕಾಶವನ್ನು ಜನವರಿ 10 ರಿಂದ 14 ರವರೆಗೆ ಬಳಸಿಕೊಂಡು ಚಂದಾದಾರರಾಗಬಹುದು.

ಆನ್​​ಲೈನ್​​ನಲ್ಲಿ ಅರ್ಜಿ ಸಲ್ಲಿಸಿದ್ರೆ ರಿಯಾಯಿತಿ
ಸಾವರಿನ್ ಗೋಲ್ಡ್​ ಬಾಂಡ್​ಗೆ ಆರ್​ಬಿಐ ಒಂದು ಗ್ರಾಂಗೆ 4,786 ರೂ. ನಾಮಮಾತ್ರ ಮೌಲ್ಯವನ್ನು ನಿಗದಿಪಡಿಸಿದೆ. ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸುವವರಿಗೆ ಒಂದು ಗ್ರಾಂಗೆ 50 ರೂ. ರಿಯಾಯಿತಿ ನೀಡಲಿದೆ. ಈ ರಿಯಾಯಿತಿ ಪಡೆಯಲು ಚಂದಾದಾರಿಕೆ ಸಂಪೂರ್ಣ ಪಾವತಿ ಆನ್​​ಲೈನ್​ನಲ್ಲೇ ಮಾಡಬೇಕು. ಹೀಗೆ ಆನ್​ಲೈನ್‌​ನಲ್ಲಿ ಅರ್ಜಿ ಹಾಕುವವರಿಗೆ ಒಂದು ಗ್ರಾಂ ಚಿನ್ನಕ್ಕೆ 4,736 ರೂಪಾಯಿ ಪಡೆದು ಬಾಂಡ್ ವಿತರಣೆ ಮಾಡಲಾಗುತ್ತದೆ ಎಂದು ಆರ್​ಬಿಐ ಹೇಳಿದೆ.

ಕಳೆದ ವರ್ಷ ಆರ್​ಬಿಐ ಸಾವರಿನ್ ಗೋಲ್ಡ್ ಬಾಂಡ್ 8ರ ಆವೃತ್ತಿಯ ಪ್ರತಿ ಗ್ರಾಂ ಚಿನ್ನದ ಚಂದಾದಾರಿಕೆಯ ಬೆಲೆಯನ್ನು 4,791 ರೂಪಾಯಿಗೆ ನಿಗದಿಪಡಿಸಿತ್ತು. ನವೆಂಬರ್ 29 ರಿಂದ ಡಿಸೆಂಬರ್ 3, 2021 ರವರೆಗೆ ಅವಕಾಶ ನೀಡಿತ್ತು.

ಬಾಂಡ್ ಎಲ್ಲಿ ಲಭ್ಯವಿರುತ್ತದೆ..?
ಭಾರತ ಸರ್ಕಾರದ ಪರವಾಗಿ ಆರ್​ಬಿಐ ಬಾಂಡ್​ಗಳನ್ನು ಬಿಡುಗಡೆ ಮಾಡುತ್ತದೆ. ಪಿಟಿಐ ವರದಿಯ ಪ್ರಕಾರ ಬ್ಯಾಂಕ್, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್​ಎಚ್​​ಸಿಎಲ್) , ಕೆಲವೊಂದು ನಿಗದಿಪಡಿಸಿರುವ ಅಂಚೆ -ಕಚೇರಿ, ಮಾನ್ಯತೆ ಪಡೆದ ಸ್ಟಾಕ್ ಎಕ್ಸ್​​ಚೇಂಜ್​ಗಳು , ಎನ್​ಎಸ್​ಇ ಮತ್ತು ಬಿಎಸ್​​ಇ ಮೂಲಕ ಬಾಂಡ್​ಗಳನ್ನು ಮಾರಾಟ ಮಾಡುತ್ತದೆ.

ಸಾವರಿನ್ ಗೋಲ್ಡ್​ ಬಾಂಡ್​ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು
– 2015 ನವೆಂಬರ್​ನಲ್ಲಿ ಕೇಂದ್ರ ಸರ್ಕಾರವು ಪ್ರಥಮ ಬಾರಿಗೆ ಸಾವರಿನ್ ಗೋಲ್ಡ್​ ಬಾಂಡ್​ ಯೋಜನೆಯನ್ನು ಆರಂಭಿಸಿತು.

-ಭೌತಿಕವಾಗಿ ಚಿನ್ನದ ಬೇಡಿಕೆಯನ್ನು ನಿಯಂತ್ರಿಸಲು ಮತ್ತು ದೇಶಿಯ ಉಳಿತಾಯದ ಭಾಗವನ್ನು ಆರ್ಥಿಕ ಸಮೃದ್ಧಿಗೆ ಉಳಿತಾಯದ ಮೂಲಕ ಉಳಿಸುವ ಉದ್ದೇಶ ಹೊಂದಿದೆ.

-ಈ ಯೋಜನೆಯಲ್ಲಿ ಚಿನ್ನ ನಿಮ್ಮ ಬಳಿ ಇರುವುದಿಲ್ಲ. ಡಿಜಿಟಲ್ ಗೋಲ್ಡ್ ಆಗಿರುತ್ತದೆ, ಬಾಂಡ್​ ರೂಪದಲ್ಲಿರುತ್ತದೆ.
ಒಬ್ಬ ವ್ಯಕ್ತಿ ಒಂದು ಗ್ರಾಂನಿಂದ 4 ಕೆಜಿಯವರೆಗೂ ಈ ಯೋಜನೆಯಲ್ಲಿ ಚಿನ್ನದ ಹೂಡಿಕೆ ಮಾಡಬಹುದು.

-ಬಾಂಡ್​ ರೂಪದಲ್ಲಿರುವ ಕಾರಣ ಚಿನ್ನದ ಕಳ್ಳತನದ ಭಯವಿಲ್ಲ. ಬ್ಯಾಂಕ್ ಲಾಕರ್​ನಲ್ಲಿ ಇಡುವ ಗೋಜು ಕೂಡ ಇರುವುದಿಲ್ಲ.

-ಗೋಲ್ಡ್ ಬಾಂಡ್​ ಮೇಲೆ ಹೂಡಿಕೆ ಮಾಡಿದರೆ ವಾರ್ಷಿಕವಾಗಿ 2 ಹಂತದಲ್ಲಿ ಬಡ್ಡಿಯೂ ಸಿಗುತ್ತದೆ. ಕೇಂದ್ರ ಸರ್ಕಾರ ಇದಕ್ಕೆ ಭದ್ರತೆ ಒದಗಿಸುತ್ತದೆ.

-ಈಗ ಹೂಡಿಕೆ ಮಾಡಿದರೆ ಬಾಂಡ್ ಮೆಚ್ಯೂರಿಟಿಯಾಗುವ ಸಂದರ್ಭದಲ್ಲಿ ಆಗಿನ ಚಿನ್ನದ ಮೊತ್ತ ನಿಮ್ಮ ಖಾತೆಗೆ ಬರುತ್ತದೆ.

-ಈ ಯೋಜನೆ 8 ವರ್ಷದ್ದಾಗಿದ್ದು, 5 ವರ್ಷಗಳ ಬಳಿಕ ಯೋಜನೆಯಿಂದ ಹೊರ ಬರಬಹುದು.

Leave a Reply

Your email address will not be published. Required fields are marked *

error: Content is protected !!