By Election Tricks: ಸಿಂಧಗಿ, ಹಾನಗಲ್ ಕ್ಷೇತ್ರಗಳ ಗೆಲ್ಲೋಕೆ ಕಾರ್ಯತಂತ್ರ ರೂಪಿಸಿದ್ದೇವೆ – ಸಿಎಂ ಬಸವರಾಜ್ ಬೊಮ್ಮಾಯಿ

ದಾವಣಗೆರೆ: ಸಿಂಧಗಿ, ಹಾನಗಲ್ ಈ ಎರಡೂ ಕ್ಷೇತ್ರಗಳ ಉಪ ಚುನಾವಣೆ ಗೆಲ್ಲುವುದಕ್ಕಾಗಿಯೇ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ಮತ್ತು ಸಿಂಧಗಿ ಎರಡೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಲಾಗಿದ್ದು, ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯ ಮನವೊಲಿಸುವ ಕಾರ್ಯ ನಡೆಯುತ್ತಿದೆ.ಅವರು ಕಣದಿಂದ ಹಿಂದಕ್ಕೆ ಸರಿಯುವ ವಿಶ್ವಾಸವಿದೆ ಎಂದು ಹೇಳಿದರು.
ಹಾನಗಲ್ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಸಿ.ಆರ್. ಬಳ್ಳಾರಿ ನನಗೆ ಆಪ್ತರು. ಮೊದಲಿನಿಂದಲೂ ಪರಿಚಯಸ್ಥರು. ಹಾನಗಲ್‌ನ ಉಮೇದುವಾರಿಕೆ ಹಿಂಪಡೆಯಲು ಸಿ.ಆರ್.ಬಳ್ಳಾರಿ ಜತೆ ಚರ್ಚಿಸಿದ್ದೇವೆ. ಅವರು ನಾಮಪತ್ರ ವಾಪಸ್ಸು ಪಡೆಯುವ ಭರವಸೆ ಇದೆ ಎಂದರು.
ಬೆಂಗಳೂರಿನ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಮಾರ್ಮಿಕವಾಗಿ ಬೊಮ್ಮಾಯಿ ಉತ್ತರ ನೀಡಿದರು.
