ಕೆನರಾ ಬ್ಯಾಂಕಿನಿಂದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸ್ಟ್ರೆಚರ್ ಕೊಡುಗೆ
ದಾವಣಗೆರೆ : ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ವಿಧಿಸಲಾದ ಲಾಕ್‍ಡೌನ್‍ನಿಂದ ಎಲ್ಲಾ ಕ್ಷೇತ್ರಗಳ ವ್ಯವಹಾರ ಪ್ರಮಾಣ ತೀವ್ರ ಕುಸಿತವಾಗಿದೆ. ದೇಶ ಎದುರಿಸುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸರ್ಕಾರದ ಜೊತೆಗಿದ್ದು ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ ಎಂದು ಕೆನರಾ ಬ್ಯಾಂಕಿನ ವಿಭಾಗಿಯ ಪ್ರಭಂದಕ ಜಿ.ಜಿ. ದೊಡ್ಡಮನಿ ಹೇಳಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ ಅವರಿಗೆ ಸ್ಟ್ರೆಚರ್‍ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, 1906 ರಲ್ಲಿ ಕೀರ್ತಿಶೇಷ ಆಮ್ಮೆಂಬಳ ಸುಬ್ಬರಾವ್ ಪೈ ಅವರಿಂದ ಚಿಕ್ಕ ಹಣಕಾಸು ಸಂಸ್ಥೆಯಾಗಿ ಆರಂಭಗೊಂಡ ಕೆನೆರಾ ಬ್ಯಾಂಕ್ ಇಂದಿಗೆ 16.86 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯವಹಾರ ದಾಖಲಿಸಿ ದೇಶದ ಅಗ್ರಗಣ್ಯ ರಾಷ್ಟ್ರೀಕೃತ ಬ್ಯಾಂಕ್ ಎನಿಸಿಕೊಂಡಿದೆ. ಸಾರ್ವಜನಿಕ ಸಹಕಾರದಿಂದಲೇ ಈ ಮಟ್ಟಕ್ಕೆ ಬೆಳೆದಿರುವ ಕೆನರಾ ಬ್ಯಾಂಕ್ ಸದಾ ಸಮಾಜಸೇವೆಯಲ್ಲಿ ತನ್ನನ್ನು ಗುರುತಿಸಿಕೊಂಡು ಸಮಾಜದ ಋಣ ತೀರಿಸುತ್ತಿದೆ ಎಂದರು.
ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ ಮಾತನಾಡಿ ಕೆನರಾ ಬ್ಯಾಂಕಿನ ಸಮಾಜ ಸೇವೆ ಅನುಕರಣೀಯ. ಸಾರ್ವಜನಿಕರಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ವೀಲ್ ಚೇರ್ಸ್, ಸ್ಟ್ರೆಚರ್, ಪಲ್ಸ್ ಆಕ್ಸಿಮೀಟರ್ ಮುಂತಾದ ಸಲಕರಣೆಗಳನ್ನು ಕೆನರಾ ಬ್ಯಾಂಕ್ ನೀಡಿದೆ. ಇದು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ನೆರವಾಗಲಿದೆ. ಮತ್ತು ಕೆನರಾ ಬ್ಯಾಂಕ್ ಕೊರೊನಾ ಸಂತ್ರಸ್ತರಿಗೆ, ಪರಿಚಾರಕರಿಗೆ, ವಾರಿಯರ್ಸ್‍ಗಳಿಗೆ ಆಹಾರ ಸೇವೆಯನ್ನು ಒದಗಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ನಿವಾಸಿ ವೈದಾಧಿಕಾರಿ ಡಾ.ಮಂಜುನಾಥ ಪಾಟೀಲ್, ವಿನಯಕುಮಾರ್, ಕೆನರಾ ಬ್ಯಾಂಕ್ ವಿಭಾಗಿಯ ಪ್ರಬಂಧಕ ಆರ್.ಶ್ರೀನಿವಾಸ, ಹಿರಿಯ ಪ್ರಬಂಧಕ ಬಿ.ಎ.ಸುರೇಶ್, ಜಿಲ್ಲಾಸ್ಪತ್ರೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.