ಭದ್ರಾನಾಲೆಯಿಂದ ಅನಧಿಕೃತವಾಗಿ ನೀರೆತ್ತುವರ ವಿರುದ್ಧ ಕ್ರಮ :ಅಧೀಕ್ಷಕ ಅಭಿಯಂತರರಿಂದ ಎಚ್ಚರಿಕೆ

ದಾವಣಗೆರೆ: ಭದ್ರಾ ಬಲದಂಡೆ ನಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪ್‍ಸೆಟ್, ಡಿಸೇಲ್ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡು ನೀರೆತ್ತುವವರ ವಿರುದ್ಧ ನಿಗಮದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನೀರಾವರಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಆರ್. ಪ್ರಾಜೆಕ್ಟ್‍ನ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.

ಭದ್ರಾ ಯೋಜನೆಯ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪಸೆಟ್, ಡಿಸೇಲ್ ಪಂಪಸೆಟ್, ಹಾಗೂ ಇತರೆ ನೀರೆತ್ತುವ ಉಪಕರಣಗಳನ್ನು ಅಳವಡಿಸಿಕೊಂಡು ನೀರೆತ್ತುತ್ತಿರುವುದರಿಂದ ಅಚ್ಚುಕಟ್ಟು ಕೊನೆಯ ಭಾಗದ ರೈತರುಗಳಿಗೆ ಸಮರ್ಪಕವಾಗಿ ನೀರನ್ನು ಹರಿಸಲು ಸಾಧ್ಯವಾಗಿರುವುದಿಲ್ಲ ಎಂದು ಅಚ್ಚುಕಟ್ಟು ರೈತರು ದೂರನ್ನು ನೀಡಿದ್ದು, ಉಚ್ಚ ನ್ಯಾಯಲಯದ ರಿಟ್ ಅರ್ಜಿ ಸಂಖ್ಯೆ:15744/2019 ಪಿಐಎಲ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಉಚ್ಛ ನ್ಯಾಯಾಲಯವು 2019ರ ನವೆಂಬರ್ 04 ರಂದು, ಭದ್ರಾ ಕಾಲುವೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ವಿದ್ಯುತ್ ಪಂಪ್‍ಸೆಟ್, ಡಿಸೇಲ್ ಪಂಪ್‍ಸೆಟ್ ಹಾಗೂ ಇತರೆ ನೀರೆತ್ತುವ ಸಲಕರಣೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿರುತ್ತದೆ. ನ್ಯಾಯಲಯದ ಆದೇಶದಂತೆ ಭದ್ರಾ ನಾಲೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್ ಗಳನ್ನು ತೆರವುಗೊಳಿಸದೇ ಇರುವುದರಿಂದ ನ್ಯಾಯಾಲಯವು 2021ರ ಮೇ.5
ರಂದು ನ್ಯಾಯಾಂಗ ನಿಂದನೆ ಆರೋಪದ ಆದೇಶವನ್ನು ಹೊರಡಿಸಿರುತ್ತದೆ.

ಹೀಗಾಗಿ 2021 ರ ಮೇ. 05 ರ ದಿನಾಂಕದವರೆಗೆ ಇದ್ದಂತಹ ಅನಧಿಕೃತ ಪಂಪ್‍ಸೆಟ್‍ಗಲನ್ನು ತೆರವುಗೊಳಿಸಿರುವುದನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಭದ್ರಾ ಬಲದಂಡೆ ನಾಲೆ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪ್‍ಸೆಟ್, ಡಿಸೇಲ್ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡು ನೀರೆತ್ತುವವರ ವಿರುದ್ಧ ನಿಗಮದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನೀರಾವರಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಆರ್. ಪ್ರಾಜೆಕ್ಟ್ ನ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!