ಹಸಿರು ಉಳಿಸಬೇಕು, ರಕ್ತದಾನ ಮಾಡಬೇಕು, ಯುವಕರು ರಕ್ತದಾನ ಮಾಡಲು ಮುಂದೆ ಬನ್ನಿ : ಮಹಾಂತೇಶ್ ಬೀಳಗಿ

ದಾವಣಗೆರೆ : ರಕ್ತದಾನ ಮಾಡಿದರೆ ಒಂದು ಜೀವ ಉಳಿಸಿದ ಶ್ರೇಷ್ಟ ಕೆಲಸ ನಮ್ಮದಾಗುತ್ತದೆ. ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶುಕ್ರವಾರ ರಿಂಗ್ ರಸ್ತೆಯಲ್ಲಿರುವ ಕರ್ನಾಟಕ ಹಿಮೋಫಿಲಿಯ ಸೊಸೈಟಿಯಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಕೋವಿಡ್-19 ಸೋಂಕಿನಂತಹ ಸಂದಿಗ್ಧ ಪರಿಸ್ಥಿತಿಗಿಂತಲೂ, ಸೂಕ್ತ ಸಮಯಕ್ಕೆ ರಕ್ತ ಸಿಗದೆ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಿದೆ. ಹಸಿರು ಉಳಿಸಬೇಕು, ರಕ್ತ ದಾನ ಮಾಡಬೇಕು ಎಂಬ ನುಡಿಯಂತೆ ಪರಿಸರವನ್ನು ಉಳಿಸೋಣ, ನಮ್ಮಲ್ಲಿರುವ ರಕ್ತವನ್ನು ದಾನ ಮಾಡೋಣ. ಹೆಚ್ಚು ಹೆಚ್ಚು ರಕ್ತ ದಾನ ಮಾಡಿದಷ್ಟು ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಲು ಸ್ವಯಂಪ್ರೇರಿತವಾಗಿ ಮುಂದಾಬೇಕು. ಅದರಲ್ಲೂ ಯುವಜನರು ಹೆಚ್ಚು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಾಗದೆ, ರಕ್ತದಾನಿಗಳು ತಮ್ಮ ಆರೋಗ್ಯ ವೃದ್ಧಿಗೊಳಿಸಿಕೊಳ್ಳಬಹುದು ಎಂದರು.

ಕೋವಿಡ್-19 ಸೋಂಕು ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬರುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಆದಷ್ಟು ಜಾಗರೂಕತೆ ವಹಿಸಿ ಮಕ್ಕಳನ್ನೂ ಸೇರಿದಂತೆ, ಅನಗ್ಯವಾಗಿ ಯಾರೂ ಹೊರಗಡೆ ಬರದೇ ಮನೆಯಲ್ಲಿಯೇ ಸುರಕ್ಷಿತರಾಗಿರಿ ಎಂದು ಮನವಿ ಮಾಡಿದರು. ‘ಸಮಾಜದಿಂದ ಬಂದದ್ದನ್ನು ಸಮಾಜಕ್ಕೇ ಅರ್ಪಿಸಬೇಕು’ ಎಂಬಂತೆ ನಗರದ ಕಿರುವಾಡಿ ಗಿರಿಜಮ್ಮ ಮತ್ತು ಬಿ.ಸಿ.ಉಮಾಪತಿಯವರನ್ನು ನೋಡಿ ಅರ್ಥೈಸಿಕೊಳ್ಳಬೇಕಿದೆ. ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ತಲ್ಲೀನರಾಗಿ ಸಮಾಜಸೇವೆಯನ್ನು ತಮ್ಮ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡು ಬದುಕುತ್ತಿದ್ದಾರೆ. ಇದು ನಿರಂತರವಾಗಿರಲಿ ಎಂದು ಅಭಿನಂದಿಸಿದರು. ನಂತರ ರಕ್ತದಾನ ಮಾಡಿದ ಯುವಕರಿಗೆ ಹೂ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ದಾವಣಗರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಗೌರವ ಅಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ವರ್ತಕ ಬಿ.ಸಿ.ಉಮಾಪತಿ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!