ತೀಪುಗಳ ತರ್ಜುಮೆ ಕೆಲಸ ಆರಂಭಿಸಲು ಸಿಎಂ ಸೂಚನೆ

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಮಾನ ನೀಡಿದ ನ್ಯಾಯಾಧೀಶರು, ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಹಾಗೂ ವಕೀಲರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ `ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ಹಾಗೂ ಕಾನೂನಿಗೆ ಸಂಬಂಧಿಸಿದ ಎಲ್ಲ ಪಾರಿಭಾಷಿಕ ಪದಗಳನ್ನು ಒಳಗೊಂಡ ಕನ್ನಡ‌ ನಿಘಂಟು ರೂಪಿಸುವುದು ಹಾಗೂ ನ್ಯಾಯಾಲಯಗಳ ತೀರ್ಪುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸ ಆರಂಭಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದರು.
ನ್ಯಾಯಾಲಯದ ತೀರ್ಮಾನ ಬರುವುದಷ್ಟೇ ಮುಖ್ಯವಲ್ಲ. ಆ ತೀರ್ಮಾನದ ಸರಿಯಾದ ವ್ಯಾಖ್ಯಾನ ಮತ್ತು ಅನುಷ್ಠಾನ ಅಗತ್ಯ. ಕೆಲವೊಮ್ಮೆ‌ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನ್ಯಾಯಾಲಯದ ತೀರ್ಮಾನವನ್ನು ವ್ಯಾಖ್ಯಾನ ಮಾಡುತ್ತಾರೆ. ಇಂತಹ ಅಪಾಯ ತಡೆಯಬೇಕಾದರೆ ಆಡಳಿತ ನಡೆಸುವವರಿಗೆ ಕಾನೂನಿನ ಜ್ಞಾನ ಇರಬೇಕಾಗುತ್ತದೆ ಎಂದು ಹೇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ಜಿ.‌ ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.‌ಸುನಿಲ್ ಕುಮಾರ್, ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ, ವಿಶ್ರಾಂತ ಕುಲಪತಿ ಮಲ್ಲೇಪುರಂ‌ ಜಿ. ವೆಂಕಟೇಶ್, ಕನ್ನಡ‌ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!