ಬಿಜೆಪಿ ಹಿಂದುತ್ವದ ಷಡ್ಯಂತ್ರದ ಬಗ್ಗೆ ಎಚ್ಚರ: ಸಿದ್ದರಾಮಯ್ಯ

ಉಡುಪಿ: ಕಾಂಗ್ರೆಸ್ ಹಿಂದುತ್ವ ಹಾಗೂ ಮನುವಾದದ ವಿರುದ್ಧವಾಗಿದೆಯೇ ಹೊರತು ಹಿಂದೂ ಹಾಗೂ ಹಿಂದೂ ಧರ್ಮದ ವಿರುದ್ಧವಾಗಿಲ್ಲ. ಬಿಜೆಪಿಯ ಹಿಂದುತ್ವಕ್ಕೆ ಜನತೆ ಮರುಳಾಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇಲ್ಲಿನ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿರುವ ಅವರು, ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಕರಾವಳಿ ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಇನ್ನಾದರೂ ಬಿಜೆಪಿ ಷಡ್ಯಂತ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್‌ ಬಡವರಿಗಾಗಿ ಕೃಷಿ ಭಾಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯ, ಶಾದಿಭಾಗ್ಯ, ಹಸಿರು ಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದರೆ ಬಿಜೆಪಿ ಲೂಟಿ ಹೊಡೆಯುವುದರಲ್ಲಿ ಮಗ್ನವಾಗಿದೆ. ವರ್ಗಾವಣೆ, ಬಡ್ತಿ, ಗುತ್ತಿಗೆ ಕಾಮಗಾರಿಗಳಲ್ಲಿ ಕಮಿಷನ್ ದಂಧೆಗಿಳಿದಿದೆ. ವಿಧಾನಸೌಧದ ಗೋಡೆಗಳಿಗೆ ಕಿವಿಗೊಟ್ಟರೆ ಲಂಚ ಪಿಸುಗುಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳು ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಲು ಮುಂದಾಗಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಕರಾವಳಿಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಇಲ್ಲಿನ ಶಾಸಕರು, ಸಚಿವರು, ಸಂಸದರು ಜನತೆಗೆ ತಿಳಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಕರಾವಳಿಯ 9 ಲಕ್ಷ ಗೇಣಿದಾರರಿಗೆ, 15 ಲಕ್ಷ ಭೂಕಾರ್ಮಿಕರಿಗೆ ಭೂಮಿ, ಪುತ್ತಿಗೆ ಮಠದ ಭಗವದ್ಗೀತಾ ಮಂದಿರಕ್ಕೆ, ಶೃಂಗೇರಿ ಮಠದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ, ಅತ್ತೂರು ಚರ್ಚ್‌ ಗೋಪುರ ಪುನರ್ ನಿರ್ಮಾಣಕ್ಕೆ, ಶಂಕರಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು, ಮೀನುಗಾರರಿಗೆ ಸಾಗರ ದೀಪ ಯೋಜನೆ ಮೂಲಕ ಸಾವಿರಾರು ಪರ್ಸಿನ್ ಬೋಟ್‌ಗಳನ್ನು ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಸಾಧನೆಗಳನ್ನು ಜನರಿಗೆ ತಿಳಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌ ಇತರರು ಈಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!