ದೊರುವು: ಆಂಧ್ರ ಕರಾವಳಿಯ ವಿಶಿಷ್ಟ ನೀರಾವರಿ ಪದ್ಧತಿ – ಡಾ. ಮೋಹನ್ ತಲಕಾಲುಕೊಪ್ಪ

ಆಂಧ್ರಪ್ರದೇಶ :ಮರಳು ಮಣ್ಣಿನಲ್ಲಿ ಸಸ್ಯಗಳಿಗೆ ಜೀವಜಲ ಪೂರೈಸುವ ಅಪ್ಪಟ ಹಾಗೂ ಅಪೂರ್ವ ರೈತಾನ್ವೇಷಣೆ ಇದು.
ಇತ್ತೀಚೆಗೆ ನಮ್ಮ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಡಿಯಲ್ಲಿರುವ ಆಂಧ್ರಪ್ರದೇಶದ ಬಾಪಟ್ಲ ಗೇರು ಸಂಶೋಧನಾ ಕೇಂದ್ರಕ್ಕೆ ಹೋಗಿದ್ದೆ. ಸಮುದ್ರ ತಟದಿಂದ ಎಂಟು ಕಿಮೀ ದೂರದಲ್ಲಿದೆ ಈ ಗೇರು ಸಂಶೋಧನಾ ಕೇಂದ್ರ. ಮರಳುಮಣ್ಣು. ಅಲ್ಲಿನ ಗೇರು ತೋಟದ ವಿವಿಧ ತಾಕುಗಳನ್ನು ನೋಡುತ್ತಿದ್ದಾಗ ಅಲ್ಲಲ್ಲಿ ಕೃಷಿಹೊಂಡದಂತಹ ರಚನೆ ಕಾಣಸಿಕ್ಕಿತು. ಮೂರ್ನಾಲ್ಕು ಅಡಿ ಕೆಳಗೆ ಶುಭ್ರ ಸಲಿಲ! ಕೈಗೆಟುಕುವಷ್ಟು ಸನಿಹದಲ್ಲಿ. ವಿಚಾರಿಸಿದಾಗ “ಗೇರು ಸಸಿ ಇರುವಾಗ ನೀರಿನ ಪೂರೈಕೆಗೆ ಮಾಡಿಕೊಂಡ ವ್ಯವಸ್ಥೆಯಿದು. ತೆಲುಗಿನಲ್ಲಿ ‘ದೊರುವು’ ಎನ್ನುತ್ತಾರೆ. ಕೊಡದಲ್ಲಿ ನೀರು ಎತ್ತಿ ಹಾಕುತ್ತೇವೆ” ಎಂದರು ಕೇಂದ್ರದ ಮುಖ್ಯಸ್ಥ ಡಾ. ಉಮಾಮಹೇಶ್ವರ ರಾವ್.
“ಈ ಭಾಗದಲ್ಲಿ ಕೃಷಿಕರು ಈ ಪದ್ಧತಿಯನ್ನು ಸಾಮಾನ್ಯ ಎಲ್ಲಾ ಬೆಳೆಗಳಿಗೂ (ನೆಲಗಡಲೆ, ತರಕಾರಿ, ಹೂ ಇತ್ಯಾದಿ) ಅನುಸರಿಸುತ್ತಾರೆ. ಆದರೆ ಹತ್ತಡಿ ತನಕ ಮಾತ್ರ ಮಾನವಶ್ರಮದಿಂದಲೇ ಗುಂಡಿ ತೆಗೆಯುತ್ತಾರೆ. ಆಗ ಸಿಹಿನೀರು ಬರುತ್ತದೆ. ಎಲ್ಲಾದರೂ ಇಪ್ಪತ್ತು ಅಡಿ ಆಳಕ್ಕೆ ಹೋದರೆ ಉಪ್ಪು ನೀರು ಬಂದುಬಿಡುತ್ತದೆ” ನನ್ನ ಕಿವಿ ನೆಟ್ಟಗಾಯಿತು! ಬಹಳ ವಿಶೇಷವೆನಿಸಿತು. ಇದು ಹೇಗೆ?
ಬಾಪಟ್ಲದಲ್ಲಿ ಸರಾಸರಿ ಮಳೆ ೮೫೪ ಮೀಮೀ. ಬಿದ್ದ ಮಳೆ ಮರಳುಮಣ್ಣಿನಲ್ಲಿ ಸುಲಭವಾಗಿ ಬಸಿದು ಕೆಳಹೋಗುತ್ತದೆ. ಆದರೆ ಸಿಹಿನೀರು ಉಪ್ಪುನೀರಿಗಿಂತ ಕಡಿಮೆ ಸಾಂದ್ರತೆಯಿರುವುದರಿಂದ ಮೇಲ್ಪದರಗಳಲ್ಲಿ ಸಂಗ್ರಹವಾಗುತ್ತದೆ. ಹತ್ತಡಿಯ ತನಕ ಗುಂಡಿ ತೆಗೆದಾಗ ಅದರಲ್ಲಿ ಸಿಹಿನೀರು ಬರುತ್ತದೆ. ಗುಂಡಿಯ ಕೆಳಗೆ ಸೀಹಿನೀರು ನಿಲ್ಲುವ ಮಣ್ಣಿನ ಪದರ ಹಾಗೂ ನಂತರ ಉಪ್ಪುನೀರು ಇರುತ್ತದೆ (ಚಿತ್ರ ನೋಡಿ). ಹಾಗಾಗಿ ಬಹಳ ಎಚ್ಚರದಿಂದ ಬೇಕಾದಷ್ಟು ಆಳಕ್ಕೆ ಮಾತ್ರವೇ ಗುಂಡಿ ತೆಗೆದು ಉಪ್ಪುನೀರು ಮತ್ತು ಸಿಹಿನೀರು ಮಿಶ್ರಣವಾಗದಂತೆ ನೋಡಿಕೊಳ್ಳುತ್ತಾರೆ. ಇದು ಅಲ್ಲಿನ ಕೃಷಿಕರ ನಿಜವಾದ ಜಾಣ್ಮೆ! ಗುಂಡಿ ತೋಡಿದಾಗ ಉಪ್ಪುನೀರು ಸಿಗುವುದು ಸಮುದ್ರಮಟ್ಟದ ಮೇಲೆ ಅವಲಂಬಿತ.
ಇದೇ ರೀತಿಯ ‘ದೊರುವು’ ರಚನೆಗಳನ್ನು ಸಮುದ್ರದ ಪಕ್ಕವೇ ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಕಡಿಯಂ ವೆಂಕಟೇಶ್ವರುಲು ಅವರ ಗೇರು ತೋಟದಲ್ಲೂ ನೋಡಿದೆ (ಫೋಟೊ ನೋಡಿ). ಬಾಪಟ್ಲ ಕೇಂದ್ರದ ತೋಟಕ್ಕೆ ಹೋಲಿಸಿದರೆ ಇವರ ತೋಟ ಸಂಪೂರ್ಣ ಮರಳುಮಯ! ಇಂಥದೊಂದು ನೀರಾವರಿ ಪದ್ಧತಿಯನ್ನು ನಾನು ಈವರೆಗೆ ನೋಡಿರಲಿಲ್ಲ. ಪೂರ್ವ ಕರಾವಳಿಯ ಈ ರೈತಾನ್ವೇಷಣೆ ಸಮುದ್ರತಟದ ಸಮೀಪವಿರುವ ಬೆಳೆ/ತೋಟಗಳ ಜೀವದಾಯಿನಿ!
ಆಂಧ್ರ ಕರಾವಳಿಯ ಬಾಪಟ್ಲ, ಕೊತ್ತಪಟ್ನಂ, ಚಿರಾಲ, ಓಂಗೋಲ್ (ದನದ ತಳಿ ಖ್ಯಾತಿಯ) ಇತ್ಯಾದಿ ಪ್ರದೇಶಗಳಲ್ಲಿ ಸಮುದ್ರತೀರದಿಂದ ಹಲವು ಕಿಲೋಮೀಟರಿನವರೆಗೆ ಭೂ ಪ್ರದೇಶ ತೀರಾ ಎತ್ತರವಿಲ್ಲದೆ ಸಮತಟ್ಟಾಗಿದೆ. ಬಾಪಟ್ಲದ ಸರಾಸರಿ ಎತ್ತರ ೬ ಮೀಟರ್, ಚಿರಾಲ 3 ಮೀಟರ್, ಓಂಗೋಲ್ ೧೦ ಮೀಟರ್ ಎತ್ತರದಲ್ಲಿವೆ. ಉಪ್ಪುನೀರು ಸಮಸ್ಯೆಯಾಗಿ ಕಾಡುವ ಈ ಪ್ರದೇಶಗಳಲ್ಲಿ ‘ದೊರುವು’ ನೀರಾವರಿ ವಿಧಾನ ರೂಪುಗೊಂಡಿರುವುದು ಕೃಷಿಕರ ಅಮೂಲ್ಯ ಪಾರಂಪರಿಕ ಜ್ಞಾನಕ್ಕೆ ಸಾಕ್ಷಿ. ಈ ಪದ್ಧತಿಯ ಸಮಗ್ರ ವಿವರ ಪಾರಂಪರಿಕ ಜಲಮೂಲಗಳ ಅಪೂರ್ವ ದಾಖಲಾತಿ “ಡೈಯಿಂಗ್ ವಿಸಿಡಂ”ನಂತಹ ಪುಸ್ತಕದಲ್ಲಿ ಸೇರುವುದಕ್ಕೆ ಅರ್ಹ.
‘ದೊರುವು’ಗಳನ್ನು ಅಲ್ಲಲ್ಲಿ ಮಾಡಿದರೆ ಜಮೀನಿನ ಕೆಲಭಾಗ ಬೆಳೆ ಬೆಳೆಯಲು ಸಿಗವುದಿಲ್ಲ. ನೀರು ಆವಿಯಾಗುತ್ತದೆ. ನಿರ್ವಹಣೆಯೂ ಅಷ್ಟು ಸುಲಭವಲ್ಲ. ಇವನ್ನು ಗಮನದಲ್ಲಿಟ್ಟುಕೊಂಡು ಬಾಪಟ್ಲದ ಅಖಿಲ ಭಾರತ ಉಪ್ಪುನೀರು ಸಮನ್ವಿತ ಸಂಶೋಧನಾ ಕೇಂದ್ರ ‘ಸುಧಾರಿತ ದೊರುವು’ ಅಭಿವೃದ್ಧಿಪಡಿಸಿದೆ. ಇದರಲ್ಲಿ ಒಂದು ಹಂತದವರೆಗೆ ಸಿಮೆಂಟ್ ರಿಂಗುಗಳನ್ನು ಇಳಿಸಿ ಅಡ್ಡಲಾಗಿ ರಂಧ್ರಗಳುಳ್ಳ ಪೈಪುಗಳನ್ನಳವಡಿಸಿ ಸಿಹಿನೀರನ್ನು ಸಂಗ್ರಹಿಸುವ ವ್ಯವಸ್ಥೆ ಇದೆ (ಚಿತ್ರ ನೋಡಿ). ಇದರಿಂದ ಜಮೀನಿನ ಸದ್ಬಳಕೆ, ಬೆಳೆ ಬೆಳೆಯುವ ಕಾಲ ಇವೆಲ್ಲ ಹೆಚ್ಚಾಗುತ್ತದೆ. ಆದರೆ ಇದರ ಅಳವಡಿಕೆಯ ವೆಚ್ಚ ಹೆಚ್ಚಾದ್ದರಿಂದ ವ್ಯಾಪಕವಾಗಿ ಆ ಭಾಗದ ರೈತರು ಅನುಸರಿಸುತ್ತಿಲ್ಲ.
ಪಶ್ಚಿಮ ಕರಾವಳಿಯಲ್ಲಿ ‘ದೊರುವು’ ರೀತಿಯ ವ್ಯವಸ್ಥೆ ಎಲ್ಲಾದರೂ ಇರಬಹುದೇ? ಕುತೂಹಲದಿಂದ ಅಡಿಕೆ ಪತ್ರಿಕೆ ಸಂಪಾದಕ, ಜಲತಜ್ಞ ಶ್ರೀಪಡ್ರೆಯವರನ್ನು ಕೇಳಿದೆ. “ಸಂಪೂರ್ಣ ಇದೇ ರೀತಿಯ ನೀರಾವರಿ ಅಲ್ಲದಿದ್ದರೂ ಕೇರಳದ ಕೊಚಿನ್ ಸಮೀಪದ ಚೆಲ್ಲಾನಂ ಗ್ರಾಮದ ಒಂದು ತಂತ್ರಜ್ಞಾನ ಇದೆ. ಅದು ಮಳೆನೀರು ಕೊಯಿಲಿಗೆ ಸಂಬಂಧಪಟ್ಟದ್ದು. ಸಮುದ್ರತಟದ ಪ್ರದೇಶಗಳಲ್ಲಿ ಸಣ್ಣ ಬಾವಿ ತೋಡುವುದು. ಉಪ್ಪುನೀರು ಇರುವ ಅದಕ್ಕೆ ಮೇಲಿನಿಂದ ಸಿಹಿನೀರನ್ನು (ಮಳೆನೀರು) ಬಹಳ ನಿಧಾನವಾಗಿ ಬಿಡುವುದು. ಆಗ ಉಪ್ಪುನೀರಿಗಿಂತ ಕಡಿಮೆ ಸಾಂದ್ರತೆ ಇರುವುದರಿಂದ ಸಿಹಿನೀರು ಮೇಲ್ಪದರದಲ್ಲಿ ನಿಂತುಕೊಳ್ಳುತ್ತದೆ. ಅದನ್ನು ಎಚ್ಚರದಿಂದ ಬಳಸಿಕೊಳ್ಳುವುದು. ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅದಕ್ಕೆ ಸಲಹಾಸೇವೆಯೂ ಲಭ್ಯ” ಎಂದವರ ಮಾಹಿತಿ.
“ನಮ್ಮ ಕೇಂದ್ರ ಸಮುದ್ರತಟದಿಂದ ಒಂದೇ ಕಿಮೀ ದೂರದಲ್ಲಿದ್ದರೂ ಎತ್ತರದಲ್ಲಿದೆ. ಕೆಂಪು ಮಣ್ಣು. ನಮ್ಮಲ್ಲಿರುವ ಬಾವಿಯಲ್ಲಿ ಸಿಹಿನೀರೇ ಇದೆ” ಎನ್ನುತ್ತಾರೆ.ಮಂಗಳೂರಿನ ಉಳ್ಳಾಲ ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ರವಿರಾಜ್ ಶೆಟ್ಟಿ. ಪಶ್ಚಿಮ ಕರಾವಳಿಯಲ್ಲಿ ಸಮುದ್ರ ತೀರದಿಂದ ಸನಿಹದಲ್ಲೇ ಎತ್ತರದ ಜಾಗ ಶುರುವಾಗುತ್ತದೆ. ಉದಾಹರಣೆಗೆ ಮಂಗಳೂರು ನಗರ ಸಮುದ್ರಮಟ್ಟದಿಂದ ಸರಾಸರಿ ೨೨ ಮೀಟರ್ ಎತ್ತರದಲ್ಲಿದೆ. ಹಾಗಾಗಿ ಉಪ್ಪುನೀರಿನ ಸಮಸ್ಯೆ ಹಾಗೂ ‘ದೊರುವು’ ರೀತಿಯ ವ್ಯವಸ್ಥೆ ಇಲ್ಲಿ ವಿಕಾಸವಾಗಿಲ್ಲದಿರಬಹುದು. ಆದರೆ ಸಮತಟ್ಟಾದ ತೀರಪ್ರದೇಶವಿರುವ ಪಶ್ಚಿಮ ಕರಾವಳಿಯ ಕೆಲ ಸ್ಥಳಗಳಲ್ಲಿ ಇಂಥಾ ಸಾಧ್ಯತೆಯನ್ನು ಇಲ್ಲಿನ ಕೃಷಿಕರು ಕಂಡುಕೊಂಡಿರಲೂಬಹುದು. ನಿಮಗೆ ಗೊತ್ತಿದ್ದರೆ ತಿಳಿಸಿ.
ಗೇರು ಬೆಳೆಯುವ ವಿಶಿಷ್ಟ ಮಣ್ಣು :
ಬಾಪಟ್ಲದ ಗೇರು ಕೃಷಿಯ ಬಗ್ಗೆ ಕೇಳಿ ಗೊತ್ತಿತ್ತೇ ವಿನಹ ನೋಡಿ ಗೊತ್ತಿರಲಿಲ್ಲ. ಇಂಥಾ ಮರಳು ಮಣ್ಣಿನಲ್ಲಿ ಗೇರು ಬೆಳೆಯುವುದೇ ವಿಶಿಷ್ಟ. ದೇಶದ ವಿವಿಧ ಭಾಗಗಳ ಅತ್ಯುತ್ತಮ ಕೆಂಪು ಮಣ್ಣಿನಲ್ಲಿರುವ ಗೇರಿನ ಬೆಳೆಗೇನೂ ಕಡಿಮೆ ಇರಲಿಲ್ಲ. ಈ ಮಣ್ಣಿನಲ್ಲಿ ಬೆಳೆಯುವ ಗೇರಿನ ಶರೀರಕ್ರಿಯೆಯ (ಕ್ರಾಪ್ ಫಿಸಿಯಾಲಜಿ) ಅಧ್ಯಯನದ ಅಗತ್ಯ ಇದೆ. ಎಲ್ಲಕ್ಕಿಂತ ಆ ಪ್ರದೇಶದ ಸಾಂಪ್ರದಾಯಿಕ ಕೃಷಿಯ ವಿವಿಧ ತೋಟದ ಬೆಳೆಗಳಲ್ಲಿ ಉಪ್ಪುನೀರು ಸಹಿಷ್ಣು ತಳಿಗಳು ವಿಕಸಿತವಾಗಿರುವ ಸಾಧ್ಯತೆ ಇದೆ. ಗೇರಿನಲ್ಲಿ ಅಂತಹ ತಳಿಗಳನ್ನು ಹುಡುಕಲು ಬಾಪಟ್ಲ ಸಂಶೋಧನಾ ಕೇಂದ್ರಕ್ಕೆ ಸಲಹೆ ನೀಡಿದ್ದೇನೆ.
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಬೆಳೆ ನಿರ್ವಹಣೆಯ ವಿಜ್ಞಾನಿ ಡಾ. ದಿನಕರ ಅಡಿಗ ಅವರ ಮಾಹಿತಿಯಂತೆ ದೊಡ್ಡ ಮರವಾದ ಗೇರಿನ ಪ್ರಮುಖ ಬೇರು ಸುಮಾರು ೪ ಮೀಟರ್ ಆಳದವರೆಗೆ ಹೋಗುತ್ತದೆ. “ಬಾಪಟ್ಲದಲ್ಲಿ ಸುಮಾರು ೨ ಮೀಟರ್ ಆಳಕ್ಕೆ ಬೇರುಗಳು ಹೋಗುವುದನ್ನು ನೋಡಿದ್ದೇವೆ” ಎನ್ನುತ್ತಾರೆ ಡಾ. ರಾವ್. ಆದರೆ ದೊಡ್ಡ ಮರಗಳ ಬೇರು ಇನ್ನೂ ಕೆಳಗೆ ಹೋಗುತ್ತಿರಬಹುದು. ಉಪ್ಪುನೀರಿನ ಸಮಸ್ಯೆ ನಿಜವಾಗಲೂ ಗೇರಿಗೆ ಆಗುತ್ತಿದೆಯಾ? ಆದರೆ ಅದು ಹೇಗೆ ನಿರ್ವಹಿಸುತ್ತಿದೆ ಎಂಬಂತಹ ಪ್ರಶ್ನೆಗಳಿಗೆ ಅಧ್ಯಯನ ಅಗತ್ಯ.