ಕಾಂಗ್ರೆಸ್ ಟಿಕೆಟ್ ಘೋಷಣೆ: ದಾವಣಗೆರೆ ಉತ್ತರ-ದಕ್ಷಿಣಕ್ಕೆ ತಂದೆ ಮಗನಿಗೆ ಟಿಕೆಟ್: ಮಾಯಕೊಂಡಕ್ಕೆ ಬಸವಂತಪ್ಪ

ದಾವಣಗೆರೆ: 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಒಟ್ಟು 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಅತಿ ಹೆಚ್ಚು ಆಕಾಂಕ್ಷಿಗಳುಳ್ಳ ಮಾಯಕೊಂಡ ಕ್ಷೇತ್ರದಲ್ಲಿ ಕೆ.ಎಸ್. ಬಸವರಾಜ್ ಕಣಕ್ಕಿಳಿಯಲಿದ್ದಾರೆ. ಪ್ರಭಲ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರಿಗೆ ಟಿಕೆಟ್ ನಿರಾಕರಿಸಿದೆ.
ದಾವಣಗೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ 91 ವರ್ಷದ ಶಾಮನೂರು ಶಿವಶಂಕರಪ್ಪ ದಕ್ಷಿಣ ಕ್ಷೇತ್ರದಿಂದ ಹಾಗೂ ಅವರ ಪುತ್ರ ಶಾಮನೂರು ಮಲ್ಲಿಕಾರ್ಜುನ್ ಉತ್ತರ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ.
ಉಳಿದಂತೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಟ್ಟಿಯಲ್ಲಿ ಹಲವಾರು ಅಚ್ಚರಿಗಳನ್ನೊಳಗೊಂಡಿದೆ.
ಶನಿವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಚುನಾವಣಾ ಸಮಿತಿ ಉಸ್ತುವಾರಿ ಮುಕುಲ್ ವಾಸ್ನಿಕ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ, ಮೂಡುಬಿದಿರೆಯಲ್ಲಿ ಹಲವು ಕಾಲದಿಂದ ಬೀಡುಬಿಟ್ಟಿರುವ ಮಿಥುನ್ ರೈಗೆ ಮಣೆ ಹಾಕಲಾಗಿದೆ. ಬೆಳ್ತಂಗಡಿಯಲ್ಲಿ ತೀವ್ರ ವಿರೋಧದ ನಡುವೆಯೂ ಬಿ.ಕೆ. ಹರಿಪ್ರಸಾದ್ ಸಂಬಂಧಿ ರಕ್ಷಿತ್ ಶಿವರಾಂಗೆ ಗಿಟ್ಟಿಸಿದ್ದಾರೆ. ರಾಣೇಬೆನ್ನೂರು ಕ್ಷೇತ್ರದಿಂದ ಪ್ರಕಾಶ್ ಕೋಳಿವಾಡ ಸ್ಪರ್ಧಿಸಲಿದ್ದಾರೆ.