ಕುಂಟ, ಕುರುಡ ನಿಷೇಧಿತ ಪದ ಬಳಕೆಗೆ ಖಂಡನೆ
ದಾವಣಗೆರೆ: ವಿವಿಧ ಪಕ್ಷಗಳ ರಾಜಕೀಯ ನಾಯಕರು ವಿಪಕ್ಷದವರನ್ನು ಟೀಕಿಸುವ ಭರದಲ್ಲಿ ಅಂಗವಿಕಲರನ್ನು ಬಳಸಿಕೊಂಡು ಕುಂಟ, ಕುರುಡ ಎಂಬ ನಿಷೇಧ ಪದ ಬಳಕೆ ಮಾಡಿರುವುದನ್ನು ಕರ್ನಾಟಕ ರಾಜ್ಯ ವಿಕಲಚೇತನರ ಆರ್.ಪಿ.ಡಿ. ಟಾಸ್ಕ್ ಫೋರ್ಸ್ ಜಿಲ್ಲಾ ಘಟಕ ಖಂಡಿಸಿದೆ.
ಬಿಜೆಪಿ ಪಕ್ಷದ ಶಾಸಕ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಸಿ.ಟಿ. ರವಿ, ಹೆಚ್.ಡಿ. ಕುಮಾರಸ್ವಾಮಿ, ಮುನಿರತ್ನ ಹೀಗೆ ಹಲವಾರು ರಾಜಕೀಯ ನಾಯಕರು ಒಂದಿಲ್ಲೊಂದು ಸಂದರ್ಭದಲ್ಲಿ ತಮ್ಮ ಎದುರಾಳಿಗಳನ್ನು ಟೀಕಿಸುವ ಭರದಲಿ ನಿಷೇಧಿತ ಪದ ಬಳಕೆ ಮಾಡಿ ಅಂಗವಿಕಲರ ಮನಸ್ಸಿಗೆ ನೋವುಂಟು ಮಾಡಿ, ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇನ್ನುಮುಂದೆ ರಾಜಕೀಯದವರು ನಿಷೇಧಿತ ಪದ ಬಳಕೆ ಮಾಡದಂತೆ ಸೂಕ್ತ ಆದೇಶವನ್ನು ಹೊರಡಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಟಾಸ್ಕ್‌ಫೋರ್ಸ್ ಸಮಿತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಅಜ್ಜೋಳ, ರಾಜ್ಯ ಉಪಾಧ್ಯಕ್ಷರಾದ ಎಂ. ವಿಜಯಲಕ್ಷ್ಮಿ, ಕಾರ್ಯದರ್ಶಿ ಅಶ್ರಫ್, ಮುಕುಂದ ಸಾ, ಚೇತನ್, ಶಂಕ್ರಮ್ಮ, ತಿಪ್ಪೇಶಿ, ಅಂಜಿನಿ, ತಬುಸ್ಸಂ, ರೇಷ್ಮಾ, ಫರ್ಜಾನ್ ಮತ್ತಿತರರು ಉಪಸ್ಥಿತರಿದ್ದರು.