ಕೋವಿಡ್ ಪ್ರಕರಣ ಏರಿಕೆ: ಜ 31 ರವರೆಗೂ ಮುಂಜಾಗ್ರತಾ ಕ್ರಮ ಮುಂದುವರಿಕೆ – ಮಹಾಂತೇಶ್ ಬೀಳಗಿ
ದಾವಣಗೆರೆ: ಕೋವಿಡ್ ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಕ್ಕೆ ಸರಕಾರ ಹೊರಡಿಸಿದ್ದ ಮಾರ್ಗಸೂಚಿ ಜ.31 ರವರೆಗೂ ಮುಂದುವರೆಯಲಿದ್ದು, ಇದರೊಂದಿಗೆ ವಾರಾಂತ್ಯ ಕರ್ಫ್ಯೂ ಕೂಡ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್ ಮುಂತಾದೆಡೆ ಶೇ. ೫೦ ಆಸನ ಸಾಮರ್ಥ್ಯದೊಂದಿಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮಾರ್ಗಸೂಚಿಯನ್ನು ತಪ್ಪದೆ ಪಾಲಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹೇಳಿದ್ದಾರೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇವಾಲಯದ ಒಳ ಆವರಣದಲ್ಲಿ ಮಾತ್ರ ಸಂಪ್ರದಾಯದಂತೆ ದೈನಂದಿನ ಪೂಜಾ ಕೈಂಕರ್ಯ ನಡೆಸಲು ಅನುಮತಿಸಿದೆ. ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಉಳಿದಂತೆ ಯಾವುದೇ ಸೇವೆಗೆ ಅನುಮತಿ ಇಲ್ಲ. ಹಬ್ಬಗಳ ಆಚರಣೆ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮ ಇತ್ಯಾದಿ ಆಯೋಜಿಸುವಂತಿಲ್ಲ ಎಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದು ಜ. ೩೧ ರ ಬೆಳಿಗ್ಗೆ ೦೫ ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪ್ರತಿದಿನ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೦೫ ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಕರ್ಫ್ಯೂ ಅವಧಿಯಲ್ಲಿ ರೋಗಿಗಳಿಗೆ ಆಸ್ಪತ್ರೆಗೆ ದಾಖಲಿಸುವುದು ಅಲ್ಲದೆ ತುರ್ತು ಸೇವೆಯ ಚಟುವಟಿಕೆ ಹೊರತುಪಡಿಸಿ, ಉಳಿದಂತೆ ಎಲ್ಲ ಬಗೆಯ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದ ೦೫ ದಿನ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ, ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಜಾರಿಯಲ್ಲಿರುತ್ತದೆ. ಪಬ್ಸ್, ಕ್ಲಬ್ಸ್, ರೆಸ್ಟೋರೆಂಟ್ಸ್, ಬರ್ಸ್, ಹೋಟೆಲ್ ಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್, ರಂಗಮಂದಿರಗಳು, ಆಡಿಟೋರಿಯಂ, ಈಜುಕೊಳ, ಜಿಮ್, ಕ್ರೀಡಾ ಕಾಂಪ್ಲೆಕ್ಸ್ ಇತ್ಯಾದಿ ಸ್ಥಳಗಳಲ್ಲಿಯೂ ಕೂಡ ಆಸನ ಸಾಮರ್ಥ್ಯದ ಶೇ. ೫೦ ರಷ್ಟು ಮಾತ್ರ ಕಾರ್ಯಚಟುವಟಿಕೆಯನ್ನು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕೈಗಾರಿಕೆ, ಕಂಪನಿಗಳ ವ್ಯಕ್ತಿಗಳ ಅಗತ್ಯ ಚಟುವಟಿಕೆಗಳಿಗಾಗಿ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ, ಇಂತಹವರು ಅಧಿಕೃತ ಗುರುತಿನ ಚೀಟಿ ತೋರಿಸಬೇಕಾಗುತ್ತದೆ. ಟೆಲಿಕಾಂ, ಇಂಟರ್ನೆಟ್ ಸೇವೆ ಪೂರೈಕೆದಾರರು, ತುರ್ತು ಸೇವೆಗೆ ಸಂಬಂಧಿಸಿದ ವಾಹನ ಹಾಗೂ ಸಿಬ್ಬಂದಿ ಗುರುತಿನ ಕಾರ್ಡ್ ತೋರಿಸಬೇಕು. ವೈದ್ಯಕೀಯ, ಔಷಧಿ ಸೇವೆ ಸಂಬಂಧಪಟ್ಟವರಿಗೆ ನಿರ್ಬಂಧ ಇರುವುದಿಲ್ಲ. ಸರಕು ಸಾಗಾಣಿಕೆ ಸಾಗಿಸುವ ವಾಹನ, ಟ್ರಕ್, ಗೃಹ ಪೂರೈಕೆ ವಾಹನಗಳು, ಇ-ಕಾಮರ್ಸ್ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ. ಬಸ್, ರೈಲು, ಸಾರ್ವಜನಿಕ ಸಾಗಾಣಿಕೆ ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ, ಆದರೆ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ದಾಖಲೆ/ಟಿಕೆಟ್ ಹೊಂದಿರಬೇಕು. ಇವುಗಳನ್ನು ಹೊರತುಪಡಿಸಿ ಇತರೆ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ.
ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ್ದು, ಶುಕ್ರವಾರ ರಾತ್ರಿ ೧೦ ಗಂಟೆಯಿಂದ ಸೋಮವಾರ ಬೆಳಿಗ್ಗೆ ೦೫ ಗಂಟೆಯವರೆಗೆ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ರಾಜ್ಯ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿನ ಹಾಗೂ ಕೋವಿಡ್-೧೯ ಕಂಟೈನ್ಮೆಂಟ್ ಮತ್ತು ನಿರ್ವಹಣೆಗೆ, ತುರ್ತು ಸೇವೆಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ಎಲ್ಲ ಸಾರ್ವಜನಿಕ ಪಾರ್ಕ್ಗಳು ಮುಚ್ಚಲಾಗುತ್ತದೆ. ಆಹಾರ ಧಾನ್ಯ, ಆಹಾರ, ಹಣ್ಣು, ತರಕಾರಿ, ಮಾಂಸ, ಮೀನು, ಹಾಲು ಮತ್ತು ಇತರೆ ಡೈರಿ ಪದಾರ್ಥಗಳು, ಪಶು ಆಹಾರಕ್ಕೆ ಸಂಬಂಧಿಸಿದ ಅಂಗಡಿಗಳು ತೆರೆಯಲು ಅವಕಾಶವಿದೆ.
ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣುಗಳ ವ್ಯಾಪಾರಕ್ಕೆ ನಿರ್ಬಂಧ ಇಲ್ಲ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸಲ್ ಸೇವೆ ಲಭ್ಯವಿರುತ್ತದೆ. ಹೋಂ ಡೆಲಿವರಿ ವ್ಯವಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬಟ್ಟೆ, ಪಾತ್ರೆ, ಬೆಳ್ಳಿ-ಬಂಗಾರ ದಂತಹ ಅಂಗಡಿಗಳಿಗೆ ಅವಕಾಶ ಇರುವುದಿಲ್ಲ. ಬಸ್, ರೈಲು, ಸಾರ್ವಜನಿಕ ಸಾಗಾಣಿಕೆ ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ, ಆದರೆ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ದಾಖಲೆ/ಟಿಕೆಟ್ ಹೊಂದಿರಬೇಕು. ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವುದರಿಂದ, ಶನಿವಾರದಂದು ಶಾಲಾ ಕಾಲೇಜುಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಜ. ೩೧ ರವರೆಗೆ ಜಿಲ್ಲೆಯಲ್ಲಿ ಯಾವುದೇ ಧರಣಿ, ಪ್ರತಿಭಟನೆ, ರ್ಯಾಲಿ, ಉತ್ಸವ, ಜಾತ್ರೆಗಳಿಗೆ ಅವಕಾಶವಿರುವುದಿಲ್ಲ. ಮದುವೆಗಳಲ್ಲಿ ಹೊರಾಂಗಣದಲ್ಲಿ ಗರಿಷ್ಠ ೨೦೦, ಒಳಾಂಗಣದಲ್ಲಿ ಗರಿಷ್ಠ ೧೦೦ ಜನ ಮಾತ್ರ ಭಾಗವಹಿಸಲು ಅವಕಾಶವಿದೆ. ದೇವಾಲಯಗಳಲ್ಲಿಯೂ ಕೂಡ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.