ಹಂಪಿ ಸ್ಮಾರಕದ ಮೇಲೆ ಡ್ಯಾನ್ಸ್ : ಯುವಕನ ಬಂಧನ

ಹಂಪಿ ಸ್ಮಾರಕದ ಮೇಲೆ ಡ್ಯಾನ್ಸ್ : ಯುವಕನ ಬಂಧನ

ಜಯನಗರ : ವಿಶ್ವಪ್ರಸಿದ್ಧ ಹಂಪಿ ಜೈನ್‌ ದೇವಾಲಯದ ಸ್ಮಾರಕದ ಮೇಲೇರಿ ಡಾನ್ಸ್‌ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕಾಳೇನಹಳ್ಳಿಯ ದೀಪಕ್‌ಗೌಡ (25) ಬಂಧಿತ ಯುವಕ. ಈತ ಹಂಪಿ ಸ್ಮಾರಕದ ಮೇಲೇರಿ ಡ್ಯಾನ್ಸ್ ಮಾಡಿದ್ದಲ್ಲದೆ, ಅದರ ವಿಡಿಯೊ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದ.

ಇತ್ತೀಚೆಗೆ ಹಂಪಿಗೆ ಬಂದಿದ್ದ ದೀಪಕ್‌ಗೌಡ ಹಂಪಿ ಜೈನ್‌ ದೇವಾಲಯದ ಮೇಲೆ ಹಾಗೂ ಅದರ ಪರಿಸರದಲ್ಲಿ ವಿಡಿಯೊ ಚಿತ್ರೀಕರಿಸಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ.

ಈ ಸಂಬಂಧ ಫೆ. 28ರಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಸಿ. ಸುನೀಲ್‌ಕುಮಾರ್‌ ಅವರು ಹಂಪಿ ಪ್ರವಾಸಿ ಠಾಣೆಗೆ ದೂರು ಕೊಟ್ಟಿದ್ದರು. ಆ ದೂರು ಆಧರಿಸಿ ದೀಪಕ್‌ಗೌಡನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದ್ದಾರೆ.

ದೀಪಕ್‌ಗೌಡ, ಬೇಲೂರು, ಹಳೆಬೀಡು, ಪಟ್ಟದಕಲ್ಲು, ಬಾದಾಮಿ ಸೇರಿದಂತೆ ಇತರೆ ಸ್ಮಾರಕಗಳ ಬಳಿಯೂ ಇದೇ ರೀತಿ ವಿಡಿಯೊ ಚಿತ್ರೀಕರಿಸಿದ್ದ. ಹಂಪಿಯಲ್ಲಿ ನಡೆದ ಘಟನೆ ನಂತರ ಟೀಕೆ ವ್ಯಕ್ತವಾಗಿತ್ತು. ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದ ನಂತರ ಕ್ಷಮೆ ಕೂಡ ಯಾಚಿಸಿದ್ದ.

ಹಂಪಿಯಲ್ಲಿರುವ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ಮಾರಕಗಳನ್ನು ಹಾನಿಗೊಳಿಸುವುದು, ವಿರೂಪಗೊಳಿಸಿದರೆ ಎರಡು ವರ್ಷ ಜೈಲು ಶಿಕ್ಷೆ ಇದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!