ಇಡೀ ಜಗತ್ತೆ 2025 ರೊಳಗೆ ಕೇಸರೀಕರಣವಾಗಲಿದೆ; ತಾಕತ್ತಿದ್ದವರು ತಡೆಯಲಿ ನೋಡೋಣ: ಶಿವಾನಂದ್ ಬಡೀಗೇರ್

ದಾವಣಗೆರೆ: ಭಾರತೀಯ ಸಂಸ್ಕೃತಿ ಬಗ್ಗೆ ಮಾತಾಡಿದರೆ ಕೇಸರೀಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ 2025ರ ವೇಳೆಗೆ ಇಡೀ ಜಗತ್ತು ಕೇಸರೀಕರಣ ಆಗಲಿದೆ. ತಾಕತ್ತಿದ್ದವರು ತಡೆಯಲಿ ನೋಡೋಣ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಮಾತೃ ಸುರಕ್ಷಾ ಸಂಯೋಜಕ್ ಶಿವಾನಂದ ಬಡಿಗೇರ್ ಸವಾಲು ಹಾಕಿದ್ದಾರೆ.

ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ನಡೆದ ಅಂಬುಛೇದನ- ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ನಿಂತಿರುವುದೇ ಹಿಂದೂ ಧರ್ಮದ ವೈಶಿಷ್ಟ್ಯದ ಮೇಲೆ. ನಮ್ಮ ದೇಶ ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿಯಿಂದಲೇ ಅನ್ಯ ದೇಶಗಳಲ್ಲಿ ಗುರುತಿಸಿಕೊಂಡು, ಗೌರವ ಪಡೆಯುತ್ತಿದೆ. ನಾವು ಭಾರತೀಯ ಸಂಸ್ಕೃತಿಯ ಬಗ್ಗೆ ಮಾತಾಡಿದರೆ ಸಾಕು ಕೆಲವೊಂದಿಷ್ಟು ಜನರು ಕೇಸರಿಕರಣ ಮಾಡುತ್ತಿದ್ದಾರೆ ಎನ್ನುತ್ತಾರೆ. ಆದರೆ, ಬರುವ 2025 ಕ್ಕೆ ಇಡೀ ಜಗತ್ತೆ ಕೇಸರಿಕರಣವಾಗಲಿದೆ ಎಂದು ಹೇಳಿದರು.

ಹಿಂದೂಗಳು ಈ ದೇಶದ ಮೂಲ ನಾಗರೀಕರು. ಪಾರ್ಸಿ, ಯಹೂದಿ, ಮುಸ್ಲಿಂ ಸೇರಿದಂತೆ
ಅನೇಕ ಧರ್ಮಿಯರಿಗೆ ಆಶ್ರಯ ಕೊಟ್ಟವರು. ಆದರೆ ಇಸ್ಲಾಂ, ಕ್ರಿಶ್ಚಿಯನ್ ರೀತಿಯ ವಲಸೆ
ಮತಗಳನ್ನು ಅನುಸರಿಸುವವರು ನಮ್ಮ ಸಂಸ್ಕೃತಿಯಲ್ಲಿ ಇನ್ನೂ ವಿಲೀನವಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಜೀವನ ಪದ್ಧತಿ ಎಂಬುದನ್ನು ಸುಪ್ರೀಂ
ಕೋರ್ಟ್ ಹೇಳಿದೆ. ಇಂತಹ ಜೀವನ ಪದ್ಧತಿಯನ್ನು ಇಡೀ ಜಗತ್ತು ಒಪ್ಪಿಕೊಂಡಿದೆ.
ಪ್ರಪಂಚದಲ್ಲಿ ಮಾನವಕುಲ ಉಳಿಯಬೇಕಾದರೆ ಹಿಂದೂ ಜೀವನ ಪದ್ಧತಿ
ಅಳವಡಿಸಿಕೊಳ್ಳುವುದು ಅನಿವಾರ್ಯ ಎಂಬುದು ಜಗತ್ತಿಗೆ ಅರ್ಥವಾಗಿದೆ. ಹೀಗಾಗಿ
ಮುಂದೊಂದು ದಿನ ಸನಾತನ ಹಿಂದೂ ಜೀವನ ಪದ್ಧತಿಯು ಇಡೀ ಜಗತ್ತನ್ನು
ಆಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದುಬೈನಲ್ಲಿ ಶೇ.33ರಷ್ಟು ಜನ ಹಿಂದೂಗಳಿದ್ದಾರೆ. ಇಂಡೋನೇಷ್ಯಾದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ. ಅಲ್ಲೆಲ್ಲೂ ಕೋಮುಗಲಭೆ ನಡೆಯುವುದಿಲ್ಲ. ಆದರೆ ಮುಸ್ಲಿಮರು ಶೇ.15ರಷ್ಟಿರುವ ಭಾರತದಲ್ಲಿ ಗಲಭೆ
ಯಾಕೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಸೌದಿ ಅರೇಬಿಯಾದಲ್ಲಿ ಬದುಕುತ್ತಿರುವ ಹಿಂದೂಗಳು ಅಲ್ಲಿನ ಕಾನೂನು ಪಾಲಿಸುತ್ತಾರೆ. ಇಲ್ಲಿರುವ ಮುಸಲ್ಮಾನರು ನಮಗೆ ಪೂಜ್ಯವಾಗಿರುವ ಗೋವುಗಳನ್ನು ಕೊಲ್ಲುತ್ತಾರೆ.
ಹಿಂದೂಗಳು ಬಹುಸಂಖ್ಯಾತರಾಗಿರುವ ಕಾರಣದಿಂದಲೇ ಭಾರತವು ಜಾತ್ಯಾತೀತ
ರಾಷ್ಟ್ರವಾಗಿ ಉಳಿದಿದೆ. ಹೀಗಾಗಿ ನಮಗೆ ಯಾರೂ ಹಿಂದೂ-ಮುಸ್ಲಿಂ ಭಾವೈಕ್ಯತೆ
ಬೋಧಿಸುವ ಅಗತ್ಯವಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲಿರುವ ಶಿಯಾ-ಸುನ್ನಿ
ಗೊಂದಲವನ್ನು ಮೊದಲು ಸರಿಮಾಡಿಕೊಳ್ಳಲಿ ಎಂದು ಕುಟುಕಿದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಅಂಬುಛೇದನ ನೆರವೇರಿಸಿದರು. ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಸಂಚಾಲಕ ಸತೀಶ ಪೂಜಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!