ಸಿದ್ಧಗಂಗಾ ಮಠದಲ್ಲಿ ಸರ್ಕಾರದಿಂದ ದಾಸೋಹ: ಸಿಎಂ
ತುಮಕೂರು: ಸರ್ಕಾರ ವತಿಯಿಂದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ದಾಸೋಹ ಕಾರ್ಯಕ್ರಮವನ್ನು ಬರುವ ಫೆಬ್ರವರಿ ತಿಂಗಳಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠದ ಡಾ ಶಿವಕುಮಾರ ಶ್ರೀಗಳ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು, ಪತ್ರಕರ್ತರೊಂದಿಗೆ ಮಾತನಾಡಿದರು.
ಸಿದ್ಧಗಂಗಾ ಶ್ರೀಗಳು ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದರು. ಅವರ ಸಂಸ್ಮರಣೆಯಲ್ಲಿ ಪುಣ್ಯಸ್ಮರಣೆ ದಿನವನ್ನು ಕಳೆದ ವರ್ಷ ಸರ್ಕಾರ ದಾಸೋಹ ದಿನ ಎಂದು ಘೋಷಿಸಿದೆ. ಈ ವರ್ಷ ಮುಂದಿನ ತಿಂಗಳು ಸರ್ಕಾರ ದಾಸೋಹ ದಿನ ಆಚರಿಸಲಿದೆ ಎಂದರು.
ಶ್ರೀಗಳ ಗದ್ದುಗೆಗೆ ನಮಸ್ಕಾರ ಮಾಡಿರುವುದು ಮನಸ್ಸಿಗೆ ಸಂತೋಷವಾಗಿದೆ. ಅವರ ಆಶೀರ್ವಾದ ಈ ನಾಡಿನ ಜನತೆಯ ಮೇಲೆ ಇರುತ್ತದೆ. ಇವತ್ತು ಶ್ರೀಗಳ ದಾಸೋಹ ದಿನ ಬಹಳ ವಿಶಿಷ್ಟವಾಗಿ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು. ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಾಡುತ್ತಿರುವ ಮಠಮಾನ್ಯಗಳಲ್ಲಿ ಈ ದಿನವನ್ನು ಆಚರಣೆ ಮಾಡಬೇಕೆಂದು ತೀರ್ಮಾನಿಸಲಾಗುವುದು ಎಂದು ಹೇಳಿದರು.