ಕೂರಲು ಆಸನವಿಲ್ಲದ ದಾವಣಗೆರೆ ರೈಲ್ವೆ ಸ್ಟೇಷನ್ ಮುಂಭಾಗದ ಬಸ್ ನಿಲ್ದಾಣ! ಇದು ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ
ದಾವಣಗೆರೆ : ಸ್ಮಾರ್ಟ್ ಸಿಟಿ ಎಂದು ನಮಗೆ ನಾವೇ ಹೇಳಿಕೊಳ್ಳುವ ದಾವಣಗೆರೆ ನಗರದ ಬಹುತೇಕ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಕೂರಲು ಆಸನಗಳ ವ್ಯವಸ್ಥೆ ಇಲ್ಲ. ಆಸ್ಪತ್ರೆಯಿಂದ ಬರುವ ರೋಗಿಗಳು, ಶಾಲೆ, ಕಾಲೇಜುಗಳಿಂದ ಬರುವ ವಿದ್ಯಾರ್ಥಿಗಳು, ವಯಸ್ಸಾದ ವಯೋವೃದ್ದರು ಬಂದರೆ ಇಂತಹ ಬಸ್ ನಿಲ್ದಾಣಗಳಲ್ಲಿ ನಿಲ್ಲಬೇಕಿರುವುದು ಅನಿವಾರ್ಯ. ಹೌದು, ಇದಕ್ಕೆ ಪುಷ್ಠಿ ಕೊಡುವಂತಹ ಒಂದು ನಿದರ್ಶನ ಇದೆ. ದಾವಣಗೆರೆ ನಗರದ ಹೃದಯ ಭಾಗದಲ್ಲಿರುವ ರೈಲ್ವೆ ಸ್ಟೇಷನ್ ಮುಂಭಾಗದಲ್ಲಿ ಇರುವ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಕೂರಲು ಅವಕಾಶವಿಲ್ಲದಂತೆ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯ ಸ್ಮಾರ್ಟ್ ಕೆಲಸ ಇದೇನಾ? ಎಂದು ನಗರದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಕೆಲಸಗಳು ಸ್ಮಾರ್ಟ್ ಆಗಿರಬೇಕು. ಸರ್ಕಾರದ ಎಲ್ಲಾ ಯೋಜನೆಯ ಕಳಪೆ ಕಾಮಗಾರಿಯಂತೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆದರೆ ಹೇಗೆ ಸ್ಮಾರ್ಟ್ ಕಾಮಗಾರಿ ಆಗಲಿದೆ ಎಂಬ ಗೊಂದಲ ಸಾರ್ವಜನಿಕರಲ್ಲಿದೆ. ರೈಲ್ವೆ ಸ್ಟೇಷನ್ ಮುಂಭಾಗದ ಈ ನಗರ ಸಾರಿಗೆ ಬಸ್ ನಿಲ್ದಾಣದಿಂದ ಎಸ್.ಎಸ್ ಹೈಟೆಕ್ ಆಸ್ಪತ್ರೆ, ವಿದ್ಯಾನಗರ, ಹೊಸ ಬಸ್ ನಿಲ್ದಾಣ, ತೋಳಹುಣಸೆ, ಬಿಐಇಟಿ ಕಾಲೇಜ್, ಸರಸ್ವತಿ ನಗರ ಹೀಗೆ ಹಲವು ನಗರಗಳಿಗೆ ಇಲ್ಲಿಂದಲೆ ಪ್ರಯಾಣಿಕರು ಹೋಗುವುದು, ಅದೇರೀತಿ ಬೇರೆ ಬೇರೆ ನಗರಗಳಿಂದ ಬರುವ ಜನರಿಗೂ ಇದೇ ಕೇಂದ್ರ ಬಿಂದು. ಪ್ರಯಾಣಿಕರಿಗೆ ಅತಿ ಅಗತ್ಯವಾಗಿರುವ ಇಂತಹ ಬಸ್ ನಿಲ್ದಾಣಗಳಲ್ಲಿ ಕೂರಲು ಆಸನದ ವ್ಯವಸ್ಥೆ ಇಲ್ಲದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಬಸ್ ನಿಲ್ದಾಣದಲ್ಲಿ ಶಾಲಾ ಕಾಲೇಜಿನ ಹುಡುಗ-ಹುಡುಗಿಯರು, ವಯೋವೃದ್ದರು, ಮಹಿಳೆಯರು ಹೀಗೆ ಪ್ರತಿಯೊಬ್ಬರು ಬರುತ್ತಾರೆ. ಆದರೆ ಬಸ್ ನಿಲ್ದಾಣದ ಒಳಗೆ ಕಾಲೇಜು ಯುವಕರು ನೆರಳಲ್ಲಿ ನಿಂತು ಮೊಬೈಲ್ ನೊಡ್ಕೊಂಡು ಹರಟೆ ಹೊಡೆಯುತ್ತಿದ್ದರೆ, ಕಾಲೇಜು ಹುಡುಗಿಯರು, ಮಹಿಳೆಯರು, ವಯೋವೃದ್ದರು ಬಿಸಿಲಲ್ಲಿ ನಿಂತು ಬಸ್‌ಗಳಿಗಾಗಿ ಕಾಯುವ ಪರಿಸ್ಥಿತಿ ಇದೆ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಕಾಮಗಾರಿ ಕೈಗೊಂಡ ಅಧಿಕಾರಿಗಳು ಈ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕೂರಲು ಆಸನದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.