ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ದಾವಣಗೆರೆ: ನೇಕಾರರ ಸಮುದಾಯಗಳ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕೆಂದು ಮಾಜಿ ಶಾಸಕ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೇಕಾರ ಶಕ್ತಿ ಕೇಂದ್ರ ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್, ದಾವಣಗೆರೆ ಜಿಲ್ಲಾ ನೇಕಾರರ ಸಮುದಾಯದ ಒಕ್ಕೂಟ ಇವರ ಸಹಯೋಗದಲ್ಲಿ ಗುರುವಾರ ನಗರದ ಪಾರ್ವತಮ್ಮ ಡಾ. ಶಾಮನೂರು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನೇಕಾರ ಸಮುದಾಯಗಳ ಸ್ನೇಹ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರ ವೃತ್ತಿಗೆ ಸಂಬಂಧಿಸಿದ ಸರ್ಕಾರ ಎರಡು ನಿಗಮ ಮಂಡಳಿ ಹಾಗೂ ಒಂದು ಫಡರೇಶನನ್ನು ಸ್ಥಾಪಿಸಿದೆ ಆದರೆ ನೇಕಾರ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪನೆಯಾಗಿಲ್ಲ. ಸ್ಥಾಪನೆ ಆದರೆ ಶೈಕ್ಷಣಿಕ ರಾಜಕೀಯವಾಗಿ ಸಮುದಾಯ ಏಳಿಗೆ ಕಾಣಲು ಸಾಧ್ಯ ಎಂದವರು ಹೇಳಿದರು.
ವಿಧಾನಸಭೆಯಲ್ಲಿ 224 ಶಾಸಕರಿದ್ದು, ಈ ಪೈಕಿ ಶೇ.24.3ರಷ್ಟು ಹರಿಜನ ಗಿರಿ ಜನಾಂಗದವರು, 15.7 ವೀರಶೈವರು, 14.3 ರಷ್ಟು ಒಕ್ಕಲಿಗರು 13.2 ರಷ್ಟು ಮುಸ್ಲಿಂ ಜನಾಂಗದವರು ಇದ್ದಾರೆ. ಐದನೇ ಯ ಅವರಾಗಿ ನೇಕಾರರ ಸಮುದಾಯದವರು ಬರಬೇಕೆಂದು ಆಶಿಸಿದ ಅವರು, ಯಾವ ಸರ್ಕಾರ ನೇಕಾರರ ಸಮುದಾಯದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸುತ್ತದೋ ಆ ಸರ್ಕಾರಕ್ಕೆ ನೇಕಾರರು ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಗುರು ಸಿದ್ದೇಶ್ವರ ಬೃಹನ್ ಮಠದ ಬಸವರಾಜ ಪಟ್ಟದ್ದಾರ್ಯ ಸ್ವಾಮಿ ಮಾತನಾಡಿ, ಡಾ. ಈಶ್ವರಾನಂದ ಸ್ವಾಮೀಜಿ ಅವರು ಮುದನೂರು ಮಹಾಸಂಸ್ಥಾನ ಮಠ ಹುಟ್ಟುಹಾಕಿ ರಾಜ್ಯದ ಸಮಸ್ತ ನೇಕಾರ ಸಮುದಾಯದಲ್ಲಿ ಸಂಚಲನ, ಜಾಗೃತಿ, ಪ್ರಜ್ಞೆ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ನೇಕಾರ ಸಮುದಾಯಗಳ ಏಳಿಗೆಯಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರುಗಳ ಸಾಧನೆಯೇನು?. ಅವರುಗಳ ಮಾರ್ಗದರ್ಶನವೇನು?, ಈ ಮನೋಭೂಮಿಕೆಯಲ್ಲಿ ಸಮುದಾಯದವರು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ, ಹಾಗೆ ಪಾಲಿಸಿದ್ದರೆ ನಮ್ಮ ಸಮುದಾಯ ಮತ್ತೆಷ್ಟು ಅಭಿವೃದ್ಧಿ ಕಾಣುತಿತ್ತು ಎಂಬ ಚಿಂತನೆ ಬೇಕಿದೆ ಎಂದರು.
ಕುರುಹಿನಶೆಟ್ಟಿ ಸಮಾಜದ ಅಧ್ಯಕ  ಆರ್.ಹೆಚ್. ನಾಗಭೂಷಣ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಸಂಗಮೇಶ್ ಉಪಾಸೆ ಉಪನ್ಯಾಸ ನೀಡಿದರು. ಕರ್ನಾಟಕ ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ.ಪಿ. ಉಮಾಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಈಶ್ವರಾನಂದ ಸ್ವಾಮೀಜಿ, ರಾಣೆಬೆನ್ನೂರಿನ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಸ್ವಾಮಿ, ತಪಸಿ ಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನನಂದಗಿರಿ ಸ್ವಾಮಿ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದರು.
ಇದೇ ವೇಳೆ ಯಾದಗಿರಿ ಜಿಲ್ಲೆಯ ಮುದ್ದನೂರು ಮಹಾಸಂಸ್ಥಾನ ಮಠಕ್ಕೆ ಜಮೀನು ಖರೀದಿಗಾಗಿ ಧನ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ದಿಮೆ ಡಾ. ಎಂ.ಜಿ. ಮಂಜುನಾಥ್, ಕರ್ನಾಟಕ ರಾಜ್ಯ ನೇಕಾರ ಸಮುದಾಯದ ಮಹಿಳಾ ವಿಭಾಗದ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಉಮಾ ಜಗದೀಶ್, ಕರ್ನಾಟಕ ರಾಜ್ಯ ದೇವಾಂಗ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೆಚ್. ಪಾರ್ವತಿ, ಕುರುಹಿನ ಶೆಟ್ಟಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಡಾ. ಜಯಲಕ್ಷ್ಮಿ, ಶಾಂತ ಪ್ರಕಾಶ ಮಂಡಿ, ಪಟಗಾರ ಮಹಿಳಾ ಸಮಾಜದ ರಾಜ್ಯಾಧ್ಯಕ್ಷೆ ಶಾಂತ ಪ್ರಕಾಶ ಮಂಡಿ, ಪದ್ಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಜ್ಜಾ ಸರಸ್ವರಮ್ಮ, ಸ್ವಕುಳ ಸಾಲಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಭಾರತಿ ಜಿಂಧೆ, ಕಡೂರು ಚಂದ್ರಮ್ಮ ಗಾಯಿತ್ರ ರಾಮಕೃಷ್ಣ, ರಾಜಮ್ಮ ಗಂಗಾಧಶರಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪುಷ್ಪಲತಾ ಜಗನ್ನಾಥ, ಕರ್ನಾಟಕ ರಾಜ್ಯ ಸೆಂಗುಂದರ್ ಸಮಾಜದ ಅಧ್ಯಕ್ಷ ರಾಜ್ಯಾಧ್ಯಕ್ಷ ಆರ್ ಕಂದಸ್ವಾಮಿ, ಸತ್ಯನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      