ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿ ಚಿತ್ರಕ್ಕೆ ತಡೆಯಾಜ್ಞೆ
ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಚಿತ್ರದ ಶೀರ್ಷಿಕೆಗೆ ನಗರದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಆಕ್ಷೇಪ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಓಂ ಖ್ಯಾತಿಯ ಮೋಹಕ ತಾರೆ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋ ಮತ್ತು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿತ್ತು.
ರಾಜೇಂದ್ರಸಿಂಗ್ ಬಾಬು ಅವರು ಮಂಡಳಿಯಲ್ಲಿ ಈಗಾಗಲೇ ತಾವು ನಿರ್ಮಾಣ ಮಾಡುತ್ತಿರುವ ಕನ್ನಡ ಚಲನಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಎಂಬ ಶೀರ್ಷಿಕೆ ನೋಂದಣಿ ಮಾಡಿರುತ್ತಾರೆ. ಈ ಚಲನಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದರು.
ಶೇ 80ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ಅಂಬರೀಶ್ ಅವರ ನಿಧನದಿಂದ ಚಿತ್ರದ ಚಿತ್ರೀಕರಣವು ಸ್ಥಗಿತವಾಗಿತ್ತು. ಈ ಶೀರ್ಷಿಕೆಯು ರಾಜೇಂದ್ರಸಿಂಗ್ ಬಾಬು ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿದೆ. ಈ ಶೀರ್ಷಿಕೆಯನ್ನು ಬಳಸಲು ಬೇರೆ ಯಾರಿಗೂ ಯಾವುದೇ ವಿಧವಾದ ಹಕ್ಕು ಇರುವುದಿಲ್ಲ. ಹೀಗೆ ಮಾಡಿದಲ್ಲಿ ಶೀರ್ಷಿಕೆಯ ಕೃತಿಚೌರ್ಯವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯ ಹೆಸರನ್ನು ಕೊಡಬಾರದು’ ಎಂದು ರಾಜೇಂದ್ರ ಸಿಂಗ್ ಅರ್ಜಿಯಲ್ಲಿ ಹೇಳಿದ್ದರು.