‘ದಿಶಾ’ ಪ್ರಗತಿ ಪರಿಶೀಲನಾ ಸಭೆ ಉದ್ಯೋಗ ಖಾತರಿ ಕಾಮಗಾರಿ ತ್ವರಿತವಾಗಿ ಅನುಷ್ಟಾನಕ್ಕೆ ತನ್ನಿ – ಸಂಸದ ಡಾ.ಜಿ.ಎಂ ಸಿದ್ದೇಶ್ವರ

ದಾವಣಗೆರೆ: ಜಿಲ್ಲೆಯಾದ್ಯಂತ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಅನುμÁ್ಠನಕ್ಕೆ ತರಬೇಕು ಹಾಗೂ ನಿಗಧಿ ಪಡಿಸಿದ ಮಾನವ ದಿನಗಳ ಗುರಿಯನ್ನು ಸಾಧಿಸಿ ಜಿಲ್ಲೆಯ ಅಭಿವೃದ್ದಿಗೆ ಮುಂದಾಗಬೇಕೆಂದು ಲೋಕಸಭಾ ಸದಸ್ಯರಾದ ಡಾ.ಜಿ.ಎಂ ಸಿದ್ದೇಶ್ವರ ಹೇಳಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ 36 ಲಕ್ಷ ಗುರಿ ಹೊಂದಿದ್ದು ಇದರಲ್ಲಿ 41.35 ಲಕ್ಷ ಸಾಧನೆ ಮಾಡಲಾಗಿದೆ. ಹೊನ್ನಾಳಿ- ನ್ಯಾಮತಿ ತಾಲ್ಲೂಕು ಅರೆ ಮಲೆನಾಡು ಪ್ರದೇಶಗಳಲ್ಲಿ ಬರಲಿದ್ದು ಇಲ್ಲಿ ಖಾತರಿಯಡಿ ಅಡಿಕೆ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಪ್ರತಿಯೊಂದು ರೈತ ಕುಟುಂಬಕ್ಕೆ ಗರಿಷ್ಠ 2.5 ಲಕ್ಷದವರೆಗೆ ಖಾತರಿಯಡಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಆದರೆ ಜಿಲ್ಲೆಯ ಇನ್ನಿತರೆ ತಾಲ್ಲೂಕುಗಳಿಗೆ ಅಡಿಕೆ ಬೆಳೆ ಪ್ರೋತ್ಸಾಹಕ್ಕೆ ಅನುದಾನ ಒದಗಿಸಲಾಗಿರುವುದಿಲ್ಲ. ನರೇಗಾ ಯೋಜನೆಯಡಿ ಇತರೆ ತಾಲ್ಲೂಕುಗಳಲ್ಲಿ ಶಾಲಾ ಕಾಂಪೌಂಡ್, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆ, ಅಂಗನವಾಡಿ ಸೇರಿದಂತೆ ವಿವಿಧ ಆಸ್ತಿಗಳನ್ನು ಸೃಜಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ದಾವಣಗೆರೆ ತಾಲ್ಲೂಕಿನಲ್ಲಿ ಮಾತ್ರ ಖಾತರಿಯಡಿ ಶೇ 50 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದ್ದು ಇತರೆ ತಾಲ್ಲೂಕುಗಳಲ್ಲಿ ಹೆಚ್ಚು ಸಾಧನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಗಮನಿಸಬೇಕೆಂದು ಸೂಚನೆ ನೀಡಿದರು.
ಖಾಸಗಿ ಶಾಲೆಗಳಲ್ಲಿಯೂ ಕೂಡ ಶೌಚಾಲಯ ಹಾಗೂ ಇನ್ನಿತರೇ ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿಯವರು ಒದಗಿಸಬೇಕು, ಇಲ್ಲವಾದರೆ ಅಂತಹ ಶಾಲೆಯ ಪರವಾನಗಿ ರದ್ದುಗೊಳಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರದಿಂದ ಮಂಜೂರಾದ ಆದರ್ಶ ಗ್ರಾಮ ಯೋಜನೆಯಡಿ 2018-19 ನೇ ಸಾಲಿನ ಅನುದಾನ ಮಾತ್ರ ಬಿಡುಗಡೆಯಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನನ್ನ ಗಮನಕ್ಕೆ ತಂದಿಲ್ಲ. ಸಮಾಜ ಕಲ್ಯಾಣಧಿಕಾರಿ ಪ್ರತಿಕ್ರಿಯಿಸಿ ಎಲ್ಲಾ ಜಿಲ್ಲೆಗಳ ಪ್ರಗತಿ ವರದಿಯನ್ನಾಧರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದಾಗ ಯಾವುದೇ ಅಧಿಕಾರಿಗಳು ಇಂತಹ ಸಮಸ್ಯೆಗಳು ಬಂದಾಗ ನಮ್ಮ ಗಮನಕ್ಕೆ ತರಬೇಕೆಂದು ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಿದ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸಾರ್ವಜನಿಕರೊಬ್ಬರು ನನ್ನಲಿ ದೂರು ನೀಡಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ದೂರುದಾರರಿಗೆ ಮನವರಿಕೆ ಮಾಡಿಕೊಡಬೇಕು. ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣ ಮಾಡಿದ ರಸ್ತೆಯನ್ನು ಗುತ್ತಿಗೆದಾರ ಐದು ವರ್ಷಗಳವರೆಗೆ ನಿರ್ವಹಣೆ ಮಾಡಬೇಕು ಮತ್ತು ಆರನೇ ವರ್ಷದಲ್ಲಿ ಮರು ಡಾಂಬರೀಕರಣ ಮಾಡಿಕೊಡಬೇಕೆಂದು ಷರತ್ತು ಇರುತ್ತದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಲು ಯೋಜನಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಮಾಹಿತಿ ನೀಡಿ, ಪಾಲಿಕೆ ವ್ಯಾಪ್ತಿಯಲ್ಲಿ 27,500 ವಸತಿ ರಹಿತ ಕುಟುಂಬಗಳಿದ್ದು ಆ ಎಲ್ಲಾ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. 50 ಎಕರೆ ವಿಸ್ತೀರ್ಣದಲ್ಲಿ ಜಿ+2 ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಾಗ ಲೋಕಸಭಾ ಸದಸ್ಯರಾದ ಜಿ.ಎಂ.ಸಿದ್ದೇಶ್ವರರವರು ಸರ್ಕಾರದ ಯಾವುದೇ ಯೋಜನೆಗೆ ವಸತಿ, ವಿಮಾನ ನಿಲ್ದಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳಿಗೆ ಬೇಕಾದ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ಸಾರ್ವಜನಿಕವಾಗಿ ಪ್ರಕಟಣೆಯನ್ನು ನೀಡಬೇಕು. ಇಲ್ಲವಾದಲ್ಲಿ ಮಧ್ಯವರ್ತಿಗಳು ಇದರ ಹೆಚ್ಚಿನ ಲಾಭ ಪಡೆಯುವ ಸಂಭವವಿರುತ್ತದೆ ಎಂದರು.

ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿನ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಮನೆ, ನಿವೇಶನಗಳ ಸರ್ವೆಯನ್ನು ಕೈಗೊಳ್ಳಲಾಗಿದ್ದು ಆಸ್ತಿಯ ದಾಖಲೆಗಳನ್ನು ವಾರಸುದಾರರಿಗೆ ನೀಡಲಾಗುತ್ತದೆ. ಈವರೆಗೆ ಜಿಲ್ಲೆಯಲ್ಲಿ 200 ಗ್ರಾಮಗಳ ಸರ್ವೆ ಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಗ್ರಾಮಗಳಲ್ಲಿ ಆಸ್ತಿಯ ಸರ್ವೆ ಮಾಡಿ ಎಲ್ಲರಿಗೂ ಸ್ವಾಮಿತ್ವ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪೆÇ್ರ.ಎನ್.ಲಿಂಗಣ್ಣ ಮಾತನಾಡಿ, ಸರ್ಕಾರದಿಂದ ಮಂಜೂರಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಶಾಸಕರ ಗಮನಕ್ಕೆ ತನ್ನಿ, ಏಕೆಂದರೆ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಇಂತಹವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಾಮಗಾರಿಗಳ ಮಾಹಿತಿಯನ್ನು ಶಾಸಕರ ಗಮನಕ್ಕೆ ತರಬೇಕು. ಮಾಯಕೊಂಡ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ನರೇಗಾ ಯೋಜನೆಯಲ್ಲಿ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರು ಒಳಗೊಂಡಂತೆ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳಿ ಎಂದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ಅನೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಹಾಗೂ ಅಡುಗೆಕೋಣೆಯ ಸ್ವಚ್ಚತೆ ಮರೀಚಿಕೆಯಾಗಿದ್ದು ಈ ಬಗ್ಗೆ ಅಕ್ಷರ ದಾಸೋಹ ಅಧಿಕಾರಿಗಳು ಗಮನಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಮೇಯರ್ ಜಯಮ್ಮ ಗೋಪಿನಾಯ್ಕ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ ಸಿಇಒ ಡಾ.ಎ.ಚನ್ನಪ್ಪ ಸೇರಿದಂತೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!