ಜಿಲ್ಲಾ ಕಾಂಗ್ರೆಸ್ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ

IMG-20211020-WA0159

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು 24 ಸಾವಿರ ಶ್ಲೋಕಗಳನ್ನು ಹೊಂದಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಶ್ಲಾಘಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ ಎಂದು ಪ್ರಶಂಸಿಸಿದರು‌.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಕಾರ್ಯದರ್ಶಿ ಹೆಚ್.ಜಯಣ್ಣ ಮಾತನಾಡಿ, ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಅವರು ರಚಿಸಿರುವ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ, ಜನರ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿರುವ ಮಹಾಕಾವ್ಯ ರಾಮಾಯಣ ಎಂಬುದಾಗಿ ಉಲ್ಲೇಖಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರು ‘ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮೀಕಿಯಂತಹ ಮಹಾಕವಿ ನಮಗೆ ದೊರೆತಿರುವುದು ಭುವನದ ಭಾಗ್ಯ ಎಂದು ಬಣ್ಣಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಗಣೇಶ್ ಹುಲ್ಮನಿ, ಯುವ ಮುಖಂಡ ಜಗದೀಶ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹೆಚ್.ಗುರುರಾಜ್, ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಶ್ರೀಮತಿ ಆಶಾ ಉಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ಆಶಾರಾಣಿ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಶುಭಮಂಗಳ, ಜಯಮ್ಮ, ಶಿರರಮಗೊಂಡನಹಳ್ಳಿ ರುದ್ರೇಶ್, ರವಿ ಧಣಿ, ಪರಶುರಾಮ್, ಜಮ್ನಳ್ಳಿ ನಾಗರಾಜ್, ಹರೀಶ್ ಕೆ.ಎಲ್.ಬಸಾಪುರ, ಮಹ್ಮದ್ ಬಾಷಾ, ಸೈಯದ್ ಜಿಕ್ರಿಯಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!