ಜಾಂಬವಂತನಿಗೆ ಹೆಣ್ಣು ನೋಡಿದ ಜಿಲ್ಲಾ ಅರಣ್ಯಾಧಿಕಾರಿ ಜಗನ್ನಾಥ್: ಭೀಮನಿಗೆ ಸಿಕ್ಲು ಪಾರ್ವತಿ
ದಾವಣಗೆರೆ : ನಿಂತಕಡೆ ನಿಲ್ಲದೇ, ಅತ್ತ ಕಡೆಯಿಂದ ಇತ್ತ ಕಡೆ ಓಡಾಡುವ ಒಂಟಿ ಭೀಮ.ಸದ್ಯ ಈತ ವಿಧುರನಾಗಿದ್ದು, ಸುಮಾರು ಎರಡು ವರ್ಷಗಳಿಂದ ಬ್ರಹ್ಮಚಾರಿಯಾಗಿದ್ದಾನೆ…ಆದರೆ ಈತನಿಗೆ ಈಗ ಸಂತೋಷದ ಸುದ್ದಿಯೊಂದು ಸಿಕ್ಕಿದೆ…ಅದೇನಪ್ಪ ಅಂದ್ರೆ ಇನ್ನೇನೂ ಕೆಲವೇ ದಿನಗಳಲ್ಲಿ ಅವನಿಗೆ ಸಂಗಾತಿ ಸಿಗಲಿದ್ದು, ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾನೆ.
ನಾವು ಹೇಳೋದಕ್ಕೆ ಹೊರಟಿರೋದು ಯಾವುದೇ ಮನುಷ್ಯನ ಕಥೆಯಲ್ಲ..ಇದು ದಾವಣಗೆರೆ ತಾಲೂಕಿನ ಆನಗೋಡಿನ ಇಂದಿರಾಪ್ರಿಯದರ್ಶಿನಿ ಮೃಗಾಲಯದಲ್ಲಿರುವ ಒಂಟಿ ಕರಡಿ ಭೀಮನ ಕಥೆ. ಈ ಭೀಮನ ಜತೆ ಈ ಹಿಂದೆ ಲಕ್ಷ್ಮೀ ಎಂಬ ತನ್ನ ಸಂಗಾತಿ ಇದ್ದು, ಅವಳು ಅನಾರೋಗ್ಯದಿಂದ ತೀರಿ ಹೋಗುತ್ತಾಳೆ..ಬಳಿಕ ಭೀಮ ಒಂಟಿಯಾಗಿ ಕಾಲ ಕಳೆಯುತ್ತಿರುತ್ತಾನೆ..ಅವನನ್ನು ನೋಡಲು ಬರುವ ಜನರೇ ಅವನಿಗೆ ಪ್ರೀತಿಪಾತ್ರರಾಗಿರುತ್ತಾರೆ..ನಾನು ಒಂಟಿಯಾಗಿದ್ದೇನೆ ನನಗೂ ಸಂಗಾತಿ ಬೇಕು ಎನ್ನುತ್ತಿದ್ದ ಭೀಮನಿಗೆ ಈಗ ಕಂಕಣಭಾಗ್ಯ ಕೂಡಿ ಬಂದಿದ್ದು, ಇನ್ನೇನೂ ಕೆಲವೇ ದಿನಗಳಲ್ಲಿ ಪಾರ್ವತಿ ಎಂಬ ವಧು ಕರಡಿಯನ್ನು ವಿವಾಹವಾಗಲಿದ್ದಾನೆ. ಅದಕ್ಕಾಗಿ ಅರಣ್ಯಾಧಿಕಾರಿಗಳು ಕೂಡ ಸಜ್ಜಾಗಿದ್ದು, ವಿವಾಹ ಮಹೋತ್ಸವಕ್ಕೆ ವೈದ್ಯರ ಅನುಮತಿ ಕಾಯುತ್ತಿದ್ದಾರೆ. ಅಲ್ಲದೇ ಮಧುಚಂದ್ರಕ್ಕೂ ಸಮಯ ನಿಗದಿಮಾಡಲು ವೈದ್ಯರ ಬಳಿ ಅನುಮತಿ ಕೋರಿದ್ದಾರೆ.ಹಾಗಾದ್ರೆ ಆ ಪಾರ್ವತಿ ಕರಡಿ ಯಾರು ಎಂಬ ಕುತುಹೂಲವಿದ್ದು,ಅವಳ ಸಂಪೂರ್ಣ ಡೀಟೆಲ್ಸ್ ಇಲ್ಲಿದೆ.
ಪಾರ್ವತಿ ಚಿತ್ರದುರ್ಗದ ಮತ್ತು ದಾವಣಗೆರೆ ಜಿಲ್ಲೆಯ ಫಲವನಹಳ್ಳಿ ಗಡಿಭಾಗದ ನೀರ್ಥಡಿ ಫಾರೆಸ್ಟ್ ಪಕ್ಕದಲ್ಲಿ ಸಿಗುತ್ತಾಳೆ. ಮರ ಹತ್ತಿ ಕುಳಿತಿದ್ದ ಆಕೆಯನ್ನು ಕೆಳಗೆ ಇಳಿಸಲು ಅರಣ್ಯಾಧಿಕಾರಿಗಳು ಸಾಕಷ್ಟು ಕಷ್ಟಪಟ್ಟು ಇಳಿಸಿ ವನ್ಯ ಜೀವಿ ಪರಿಪಾಲಕ ಅಧಿಕಾರಿಗಳ ಆದೇಶದ ಮೇರೆಗೆ ಆನಗೋಡಿಗೆ ತರುತ್ತಾರೆ. ಅಲ್ಲಿ 7 ರಿಂದ 8 ವರ್ಷದ ಭೀಮ ಒಂಟಿಯಾಗಿದ್ದು, ಡಿಎಫ್ಒ ಜಗನ್ನಾಥ್ ಏಕಾಂಗಿಯಾಗಿದ್ದ ಭೀಮನಿಗೆ ಪಾರ್ವತಿ ಎಂಬ ಹೆಣ್ಣು ಕರಡಿ ನೋಡಿ ಆನಗೋಡಿನಲ್ಲಿರುವ ಭೀಮನ ಪಕ್ಕದ ಪ್ರತ್ಯೇಕ ಕೊಠಡಿಯಲ್ಲಿ ಪಾರ್ವತಿಯನ್ನ ಬಿಡುತ್ತಾರೆ.
ಪಾರ್ವತಿ ನೋಡಿದ ಭೀಮ ಈಗ ಸಾಕಷ್ಟು ಸಂತಸವಾಗಿದ್ದು, ಪದೇ ಪದೇ ಪಾರ್ವತಿಯನ್ನು ಇಣುಕಿ..ಇಣುಕಿ.. ನೋಡುತ್ತಿದ್ದಾನೆ..ಪಾರ್ವತಿ ಕೂಡ ಭೀಮನ ಆಕರ್ಷಣೆಗೆ ಒಳಗಾಗಿದ್ದು, ಪ್ರೇಮಾಂಕುರವಾಗಿದೆ. ಪಾರ್ವತಿಗೆ ತಿನ್ನೋದಕ್ಕೆ ಏನಾದರೂ ನೀಡಿದರೆ, ಭೀಮ ಹತ್ತಿರ ಬರುತ್ತಾನೆ..ಭೀಮನಿಗೆ ಏನಾದ್ರೂ ಕೊಟ್ಟರೆ ಪಾರ್ವತಿ ಹತ್ತಿರ ಹೋಗುತ್ತಾಳೆ..ಈ ಇಬ್ಬರ ಲವ್ ಕಹಾನಿ ನೋಡೋದೇ ಒಂದು ಚೆಂದ..ಇನ್ನು ಭೀಮ ಪಾರ್ವತಿ ಬಂದಿರೋದನ್ನು ನೋಡಿ ಮರ ಹತ್ತೋದು..ಯಾರು ಇಲ್ಲದ ವೇಳೆ ಅವಳ ಬಳಿ ಬಂದು ಮಾತನಾಡುವುದನ್ನು ಮಾಡುತ್ತಿದ್ದಾನೆ.
ಭೀಮ ಕರಡಿಗೆ ಏಳರಿಂದ ಎಂಟು ವರ್ಷ ವಯಸ್ಸಾಗಿದ್ದು, ಲಕ್ಷ್ಮೀ ಕಳೆದು ಕೊಂಡ ಭೀಮನಿಗೆ ಅನಾಥ ಪ್ರಜ್ಞೆ ಕಾಡುತ್ತಿತ್ತು.. ಯಾವಾಗಲೂ ಸಪ್ಪೆ ಮುಖ ಮಾಡಿಕೊಂಡು ಓಡಾಡುತ್ತಿದ್ದ. ಆದರೀಗ ಮೂರು ವರ್ಷದ ಪಾರ್ವತಿ ಸಿಕ್ಕಿದ್ದು, ಅವನ ವಿರಹವೇದನೆಯನ್ನು ಮೌನದ ಮೂಲಕ ಪಾರ್ವತಿಗೆ ತಿಳಿಸುತ್ತಿದ್ದಾನೆ..ಈ ಲವ್ ಕಹಾನಿ ಸದ್ಯ ಬಂಧನದ ಬೇಲಿಯಲ್ಲಿ ನಡೆಯುತ್ತಿದ್ದು, ಜಿಲ್ಲಾ ಅರಣ್ಯಾಧಿಕಾರಿ ಜಗನ್ನಾಥ್ ಮುಹೂರ್ತ ಫಿಕ್ಸ್ ಮಾಡಲು ಪಶು ವೈದ್ಯರ ಜ್ಯೋತಿಷ್ಯ ಕೇಳಬೇಕಿದೆ.. ಆ ಬಳಿಕವೇ ಇವರು ಒಂದಾಗಲಿದ್ದು, ಒಂದೇ ಮನೆಯಲ್ಲಿ ಸಂಸಾರ ಹೂಡುವವರಿದ್ದಾರೆ… ಅಲ್ಲಿಯ ತನಕ ನಾವೂ ನೀವೂ ಇಬ್ಬರು ಕಾಯಬೇಕು.