ಡಿಕೆಶಿ ಆಸ್ತಿ 1,414 ಕೋಟಿ
ರಾಮನಗರ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೋಟಿ ಕುಳಗಳ ಸ್ಪರ್ಧೆ ಗಮನ ಸೆಳೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ 1,414 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಶಿವಕುಮಾರ್ ಸೋಮವಾರ ಕನಕಪುರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ 108 ಪುಟಗಳಲ್ಲಿ ಆಸ್ತಿ ವಿವರ ನೀಡಿದ್ದಾರೆ. ಅದರಂತೆ ಡಿಕೆಶಿ ಅವರ ವೈಯಕ್ತಿಕ ಆಸ್ತಿಯೇ 1,214 ಕೋಟಿ ದಾಟಿದೆ. ಅವರ ಪತ್ನಿ ಉಷಾ 133 ಕೋಟಿ ಹಾಗೂ ಪುತ್ರ ಆಕಾಶ್ 66 ಕೋಟಿ ಆಸ್ತಿ ಹೊಂದಿದ್ದಾರೆ.
2013ರಲ್ಲಿ ಡಿಕೆಶಿ ಕುಟುಂಬದ ಆದಾಯವು 252 ಕೋಟಿ ಇದ್ದು, 2018ರಲ್ಲಿ ಅದು 840 ಕೋಟಿಗೆ ಏರಿಕೆ ಆಗಿತ್ತು. ಸದ್ಯ ಅವರ ಮೇಲೆ ವಿವಿಧ ಕ್ರಿಮಿನಲ್ ಪ್ರಕರಣಗಳೂ ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಕೆಪಿಸಿಸಿ ಅಧ್ಯಕ್ಷರ ಬಳಿ 970 ಕೋಟಿಯಷ್ಟು ಸ್ಥಿರಾಸ್ತಿ, 244 ಕೋಟಿ ಚರಾಸ್ತಿ ಇದ್ದು, 226 ಕೋಟಿ ಸಾಲವನ್ನೂ ಹೊಂದಿದ್ದಾರೆ. ಡಿಕೆಶಿ ಬಳಿ 23 ಲಕ್ಷ ಮೌಲ್ಯದ ಯೂಬ್ಲೆಟ್ ವಾಚ್ ಸಹ ಇದ್ದು, ಅವರು ಸದ್ಯ ವರ್ಷಕ್ಕೆ 14 ಕೋಟಿಯಷ್ಟು ಆದಾಯ ಗಳಿಸುತ್ತಿದ್ದಾರೆ. ಕುಟುಂಬದವರಲ್ಲಿ 4 ಕೆ.ಜಿ.ಯಷ್ಟು ಬಂಗಾರದ ಸಂಗ್ರಹವೂ ಇದೆ. ರಾಜ್ಯದ ವಿವಿಧೆಡೆ ಕೃಷಿ, ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.