ಆಶ್ರಯ ಬಡಾವಣೆಗಿಲ್ಲ ಮೂಲಭೂತ ಸೌಕರ್ಯ : ನಿವಾಸಿಗಳ ಬೇಡಿಕೆಗಿಲ್ಲ ಕವಡೆ ಕಾಸಿನ ಕಿಮ್ಮತ್ತು

ದಾವಣಗೆರೆ: ಆಶ್ರಯ ಮನೆ ಒದಗಿಸಿಕೊಟ್ಟು ಬಡಜನರಿಗೆ ಸೂರು ಒದಗಿಸಿಕೊಟ್ಟಿದ್ದೇವೆ ಎಂದು ಮೀಸೆ ತಿರುವಿಕೊಳ್ಳುವ ಜನಪ್ರತಿನಿಧಿಗಳು ಮತ್ತು ಸರ್ಕಾರ ಅಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಿದ್ದೇವೆಯಾ ಎಂಬ ಸಣ್ಣ ಆಲೋಚನೆಯನ್ನು ಸಹ ಮಾಡುವುದಿಲ್ಲ.
ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಮೂಲ ಸೌಲಭ್ಯವಿಲ್ಲದೇ ಪರದಾಡುವ ಸ್ಥಿತಿ ಮಾತ್ರ ಬಡಜನರದ್ದು, ಈಗ ಇಂತಹದ್ದೇ ಒಂದು ಪರಿಸ್ಥಿತಿಗೆ ಚನ್ನಗಿರಿ ತಾಲ್ಲೂಕಿನ ಕಗತೂರು ಗ್ರಾಮದ ಆಶ್ರಯ ಬಡಾವಣೆ ನಿವಾಸಿಗಳು ಉದಾಹರಣೆ ಆಗಿದ್ದಾರೆ.
ಕಗತೂರು ಆಶ್ರಯ ಬಡಾವಣೆಯಲ್ಲಿ ಮಳೆಗಾಲ ಬಂತೆಂದರೆ ಸಾಕು ಅಲ್ಲಿನ ರಸ್ತೆಗಳೆಲ್ಲ ಕೆಸರು ಗದ್ದೆಗಳಾಂತಾಗಿ ಬಿಡುತ್ತದೆ. ಚರಂಡಿ ಇಲ್ಲದ ಕಾರಣ ಮಳೆಯ ನೀರು ಅಲ್ಲಿಯೇ ನಿಂತು ಹೊಳೆಯಾಗಿ ರಸ್ತೆಯಲ್ಲಿ ಹರಿಯುವುದರಿಂದ ಜನ-ಜಾನುವಾರುಗಳು ಓಡಾಡಲು ಸಾಧ್ಯವಾಗದ ಸ್ಥಿತಿ ತಲೆದೋರಿದೆ.
ಈ ಬಗ್ಗೆ ಅಲ್ಲಿನ ಜನರು ಸಂಬಂಧ ಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಹ ಅವರ ಬೇಡಿಕೆ ಕವಡೆ ಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲ. ಆದ ಕಾರಣ ಅಲ್ಲಿನ ಜನರು ಶೀಘ್ರವಾಗಿ ಈ ಸಮಸ್ಯೆ ಬಗೆಹರಿಸಿ, ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ.