ಸಂಸದ ಜಿಎಂ ಸಿದ್ದೇಶ್ವರ್ ಮನವಿಗೆ ಸ್ಪಂದಿಸಿದ ಸಿಎಂ ಬಿ ಎಸ್ ವೈ : ಇನ್ನೆರೆಡು ದಿನದಲ್ಲಿ ಬರಲಿದೆ ಗುಡ್ ನ್ಯೂಸ್

ದಾವಣಗೆರೆ: ಜಿಲ್ಲೆಯಲ್ಲಿ ಸೋಂಕಿತ ಪ್ರಮಾಣ ಇಳಿಮುಖವಾಗಿದ್ದು, ಕೂಡಲೇ ದಾವಣಗೆರೆ ಜಿಲ್ಲೆಯನ್ನು ಸಂಪೂರ್ಣ ಅನ್ ಲಾಕ್ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ತಾವು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಇನ್ನೆರಡು ದಿನಗಳಲ್ಲಿ ಅನ್ ಲಾಕ್ ಮಾಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಪಾಸಿಟಿವಿಟಿ ದರ ಶೇಕಡ 6.3 ರಷ್ಟಿರುವ ಕಾರಣದಿಂದಾಗಿ ಜುಲೈ 5 ರವರೆಗೆ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಮಾಡಿ ಅನುಮತಿ ನೀಡಲಾಗಿತ್ತು, ಆದರೆ, ಈಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ತಜ್ಞರ ಸಲಹೆಯಂತೆ ಶೇ. 5 ರ ಒಳಗಡೆ ಪಾಸಿಟಿವಿಟಿ ಇರುವ ಜಿಲ್ಲೆಗಳನ್ನು ಸಂಪೂರ್ಣವಾಗಿ ಅನ್‍ಲಾಕ್ ಮಾಡಲಾಗಿದೆ. ಅದರಂತೆ ದಾವಣಗೆರೆ ಜಿಲ್ಲೆಯನ್ನು ಸಂಪೂರ್ಣ ಅನ್ ಲಾಕ್ ಮಾಡಲು ಸಿಎಂಗೆ ಮನವಿ‌ ಮಾಡಿದಾಗ ಅವರು ಸಹಮತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಸುಮಾರು ಎರಡು ತಿಂಗಳಿಂದಲೂ ಲಾಕ್ಡೌನ್ ಆಗಿರುವುದರಿಂದ ವರ್ತಕರು ತೊಂದರೆಗೀಡಾಗಿದ್ದರು. ನಗರದ ಹಾಗೂ ಜಿಲ್ಲೆಯ ವಿವಿಧ ನಗರಗಳ ವರ್ತಕರ ಒತ್ತಡದ ಕಾರಣದಿಂದಾಗಿ ನಿನ್ನೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್‍ ಅವರಿಗೆ ದೂರವಾಣಿ ಮುಖಾಂತರ ಮಾತನಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ವಹಿವಾಟುಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದ ಪರಿಣಾಮವಾಗಿ ಇದಕ್ಕೆ ಒಪ್ಪಿಗೆ ನೀಡಿದ ಪ್ರಧಾನಕಾರ್ಯದರ್ಶಿಗಳು ಕೂಡಲೇ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ ಎಲ್ಲಾ ವಹಿವಾಟುಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅನುಮತಿ ನೀಡುವಂತೆ ಸೂಚನೆ ನೀಡಿದ್ದರು, ಅದರಂತೆ ಜಿಲ್ಲಾಧಿಕಾರಿಗಳು ಹವಾನಿಯಂತ್ರಿತ ವ್ಯವಸ್ಥೆಯನ್ನು ಉಪಯೋಗಿಸದೇ ಎಲ್ಲಾ ವಹಿವಾಟುಗಳಿಗೆ ಅನುಮತಿ ನೀಡಿದ್ದರು.

ಇಂದು ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪನವರಿಗೆ ಮನವಿ ಮಾಡಿ ಕೇವಲ ಶೇಕಡ 1 ರಷ್ಟು ಮಾತ್ರ ಪಾಸಿಟಿವಿಟಿ ದರ ಹೆಚ್ಚಾಗಿದೆ, ಈ ಕಾರಣದಿಂದ ಜಿಲ್ಲೆಯ ವರ್ತಕರಿಗೆ ಅನ್ಯಾಯವಾಗಬಾರದು, ದಾವಣಗೆರೆ ಜಿಲ್ಲೆಗೂ ಸಹ ಈ ಮೊದಲು 17 ಜಿಲ್ಲೆಗಳಿಗೆ ಯಾವ ರೀತಿ ಸಂಪೂರ್ಣ ಅನ್‍ಲಾಕ್ ಘೋಷಣೆ ಮಾಡಿದ್ದೀರೋ ಅದೇ ರೀತಿ ದಾವಣಗೆರೆ ಜಿಲ್ಲೆಯನ್ನು ಸಹ ಸಂಪೂರ್ಣ ಅನ್‍ಲಾಕ್ ಮಾಡಿ ಎಂದು ಮನವಿ ಮಾಡಲಾಗಿದ್ದು, ಮನವಿ ಮೇರೆಗೆ ಒಂದೆರಡು ದಿನಗಳಲ್ಲಿ ದಾವಣಗೆರೆ ಜಿಲ್ಲೆಯನ್ನೂ ಸಹ ಸಂಪೂರ್ಣ ಅನ್‍ಲಾಕ್ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಜಿಲ್ಲೆಯ ವರ್ತಕರು ಆತಂಕಕ್ಕೆ ಒಳಗಾಗದೆ ತಾಳ್ಮೆ ವಹಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!