ದಾವಣಗೆರೆಯಲ್ಲಿ ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ: ಬಡಾವಣೆ ಠಾಣೆಯಲ್ಲಿ ಕಲಂ 505(1) ಸಿ, 505(2), 506 ರಡಿ ಪ್ರಕರಣ ದಾಖಲು
ದಾವಣಗೆರೆ: ದೇಶ ವಿಭಜನೆ ಹೇಳಿಕೆ ನೀಡುವ ದೇಶ ದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ತನ್ನಿ ಎಂದು ಹೇಳಿಕೆ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮೇಲೆ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಜಿಲ್ಲಾ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಂಸದ ಡಿ.ಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರ ವಿರುದ್ಧ ಹರಿಹಾಯ್ದಿದ್ದರು.
ಡಿ.ಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿ, ನಾನು ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರವನ್ನಾಗಿ ಕೇಳ್ತೀವಿ ಅಂತಾ ಹೇಳ್ತಿದ್ದಾರಲ್ಲಾ? ಇಂತಹ ರಾಷ್ಟ್ರದ್ರೋಹಿಗಳು, ದೇಶವನ್ನು ಛಿದ್ರ ಮಾಡ್ತೀವಿ ಎಂದು ಹೊರಟಿದ್ದಾರೆ. ಅವರಿಗೆ ಗುಂಡಿಕ್ಕಿ ಕೊಲ್ಲೋ ಅಂತಹ ಕಾನೂನು ತನ್ನಿ ಎಂದು ನರೇಂದ್ರ ಮೋದಿಯವರಿಗೆ ಈಶ್ವರಪ್ಪ ಕೋರಿಕೊಂಡಿದ್ದರು.
ಈಶ್ವರಪ್ಪನವರು ಉದ್ರೇಕವಾಗಿ ಭಾಷಣ ಮಾಡಿದ್ದಾರೆ. ಈ ಹೇಳಿಕೆಯಿಂದ ಬೇರೆ ಬೇರೆ ಜನ ಸಮುದಾಯ, ಗುಂಪುಗಳ ನಡುವೆ ದ್ವೇಷ ಅಥವಾ ವೈಮನಸ್ಸಿನ ಭಾವನೆಗಳು ಉಂಟಾಗಿ ಜನ-ಜನಗಳ ಮಧ್ಯೆ ಗಲಭೆಗಳಂತ ಕೃತ್ಯಗಳು ಜರುಗಬಹುದೆಂದು ಗೊತ್ತಿದ್ದರೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಕೊಲ್ಲುವಂತಹ ಕಾನೂನು ತರಬೇಕು ಎಂದು ಪ್ರಾಣ ಬೆದರಿಕೆ ಹಾಕಿರುವ ಹೇಳಿಕೆ ನೀಡಿದ ಪರಿಣಾಮ ಜನಗಳ ಮಧ್ಯೆ ಗಲಭೆಗಳಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಸಂಭವ ವಿರುತ್ತದೆ. ಆದ್ದರಿಂದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ನಿಜಲಿಂಗಪ್ಪ ಬಡಾವಣೆಯ ವಾಸಿ ಹನುಮಂತ ಇವರು ಫೆಬ್ರವರಿ 9 ರಂದು ಶುಕ್ರವಾರ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾವಣಗೆರೆ ಬಡಾವಣೆ ಠಾಣೆ ಪೋಲಿಸರು ದೂರಿ ದಾಖಲಿಸಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ವಿರಿದ್ದ ಐಪಿಸಿ ಕಲಂ 505(1) ಸಿ, 505(2), 506 ರಡಿ ಎಫ್ ಐ ಆರ್ ದಾಖಲು ಮಾಡಲಾಗಿದೆ.