ಕಾಂಗ್ರೆಸ್ ಟಿಕೆಟ್ ಕೊಟ್ರೂ ಕೊಡದಿದ್ರೂ ಹರಿಹರದಿಂದಲೇ ಸ್ಪರ್ಧೆ: ಎಸ್. ರಾಮಪ್ಪ
ಬೆಂಗಳೂರು : ನನಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ. ಆದರೆ, ಟಿಕೆಟ್ ಸಿಕ್ಕರೂ, ಸಿಗದಿದ್ದರೂ ಹರಿಹರದಲ್ಲಿಯೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹರಿಹರ ಶಾಸಕ ಎಸ್. ರಾಮಪ್ಪ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ. ನಂತರ ಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಾನು ಪಕ್ಷದ ನಿಷ್ಠಾವಂತ. ಹಾಲಿ ಶಾಸಕ. ಈ ಬಾರಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಆದರೂ, ಟಿಕೆಟ್ ಪ್ರಕಟಿಸಿಲ್ಲ. ಟಿಕೆಟ್ ಇನ್ನೂ ಪ್ರಕಟಿಸದೇ ಇರುವುದರ ಹಿಂದೆ ಕಾಣದ ಕೈಗಳಿವೆ ಎಂದಿದ್ದಾರೆ.
ಮೂರನೇ ಪಟ್ಟಿಯಲ್ಲಿ ತಮಗೆ ಟಿಕೆಟ್ ಸಿಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದರು. ಆದರೂ, ಟಿಕೆಟ್ ಸಿಗದಿರುವುದಕ್ಕೆ ನೋವಾಗಿದೆ ಎಂದು ರಾಮಪ್ಪ ಹೇಳಿದ್ದಾರೆ.
ಹರಿಹರದಿಂದ ಸ್ಪರ್ಧಿಸುವುದಾಗಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹೇಳಿಕೆ ನೀಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಎಲ್ಲಿದ್ದಾರೋ ಅಲ್ಲಿ ನೋಡಿಕೊಳ್ಳಬೇಕು. ಹಾಲಿ ಶಾಸಕರು ಇರುವ ಕಡೆ ಬಂದು ಸ್ಪರ್ಧಿಸುತ್ತೇನೆ ಎಂದರೆ ಯಾರು ಕೇಳುತ್ತಾರೆ? ಅಂಥವರಿಗೆ ಟಿಕೆಟ್ ಕೊಟ್ಟರೆ ಅದು ಪಕ್ಷದ ರೀತಿಯೇ ಅಥವಾ ನ್ಯಾಯವೇ? ಎಂದು ಮರು ಪ್ರಶ್ನಿಸಿದರು.