ಹರಕೆಯ ಕುರಿಗಳಿಗೆ ದುಬಾರಿ ಮೇವು.! ಕುರಿಗಳಿಗೆ ಬಾರಿ ಡಿಮ್ಯಾಂಡ್: ದುರ್ಗಾಂಬಿಕ ಜಾತ್ರೆಗೆ ದೇವನಗರಿ ಸಜ್ಜು

ದಾವಣಗೆರೆ : ಮಾ.13ರಿಂದ 16 ರವರೆಗೆ ನಡೆಯಲಿರುವ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ಬೆಣ್ಣೆನಗರಿ ದಾವಣಗೆರೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕಾರ್, ಬೈಕ್‌ಗಳು ಕಾಣುತ್ತಿದ್ದ ನಗರದ ಪ್ರತಿ ಮನೆಯಲ್ಲೂ ಇದೀಗ 2-3 ಕುರಿಗಳು ಕಾಣಸಿಗುತ್ತಿವೆ. ಇನ್ನೂ ಹಬ್ಬದ ದಿನದವರೆಗೂ ಇರಬೇಕಾದ ಕುರಿಗಳ ಆಹಾರಕ್ಕಾಗಿ ಹಸಿ ಹುಲ್ಲು ಮಾರಾಟವೂ ಜೋರಾಗಿ ನಡೆಯುತ್ತಿದೆ. ನಗರದ ಡಾಂಗೆಪಾರ್ಕ್ ಬಳಿಯಲ್ಲಿ ಲೈನಲ್ಲಿ ಹಳ್ಳಿಗರು ಹಸಿ ಹುಲ್ಲು ಮಾರಾಟ ಮಾಡುತ್ತಿದ್ದು ವ್ಯಾಪಾರ ಬಲು ಜೋರಾಗಿ ನಡೆಯುತ್ತಿದೆ. ಒಂದು ಪೆಂಡಿ ಹುಲ್ಲಿಗೆ 100 ರಿಂದ 120ರೂನಂತೆ ದಿನಕ್ಕೆ ಒಂದರಿAದ ಎರಡು ಹೊರೆ ಹುಲ್ಲನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ಚಿಕ್ಕ ಕಟ್ಟಿಗೆ 10 ರೂನಂತೆ ಮಾರುತ್ತಿದ್ದಾರೆ.
ಇನ್ನು ನಗರ ಪ್ರದೇಶದ ಜನ ಕುರಿಗಳ ಆಹಾರಕ್ಕಾಗಿ ದಿನವೊಂದಕ್ಕೆ ಬೇಕಾಗುವಷ್ಟು ಹುಲ್ಲನ್ನು ಕೊಂಡುಕೊಳ್ಳುತ್ತಿದ್ದಾರೆ. ನಗರ ಪ್ರದೇಶದ ಹೊರವಲಯಗಳಲ್ಲಿ ಅಂದರೆ ಹೊಲ, ಗದ್ದೆ, ತೋಟಗಳಲ್ಲಿ ಸಿಗುವ ಹಸಿ ಹುಲ್ಲನ್ನು ಕೊಯ್ದು ತಂದು ಹಳ್ಳಿಗರು ಮಾರಾಟ ಮಾಡುತ್ತಿದ್ದಾರೆ. ಕಾಟ್‌ತೆರೆ ಹುಲ್ಲು, ರಾಗಿ ಕಡ್ಡಿ ಹುಲ್ಲು, ಗೊರ್‌ಮೆಂಟ್ ಹುಲ್ಲು, ಕರ್ಕಿ ಹುಲ್ಲು ಸೇರಿದಂತೆ ಇನ್ನು ವಿಧವಿಧವಾದ ಹುಲ್ಲನ್ನು ತಂದು ಮಾರಾಟ ಮಾಡಲಾಗುತ್ತಿದೆ. ಭಾಗ್ಯಮ್ಮ ಎಂಬುವರು ಇದೀಗ 8 ದಿನಗಳಿಂದ ಹಸಿ ಹುಲ್ಲು ಮಾರಾಟ ಮಾಡುತ್ತಿದ್ದು, ಇಲ್ಲಿಯವರೆಗೆ 3 ರಿಂದ 3500 ರೂಗಳಷ್ಟು ಹಣ ಸಂಪಾದನೆ ಮಾಡಿದ್ದಾರೆ. ನಗರ ಪ್ರದೇಶದವರೆ ಆದ ಭಾಗ್ಯಮ್ಮ ಬೆಳಿಗ್ಗೆ 5 ಗಂಟೆಗೆ ಎದ್ದು ನಗರದ ಹೊರ ವಲಯದ ಹೊಲ, ಗದ್ದೆ, ತೋಟಗಳಿಗೆ ಹೋಗಿ ದಿನಕ್ಕೆ 2 ಹೊರೆ ಹುಲ್ಲು ಕೊಯ್ದು ತಂದು ಮಾರುತ್ತಾರೆ ಎಂದು ಮಾಹಿತಿ ನೀಡಿದರು.
ಕುರಿ ದುಬಾರಿ :
ದುಗ್ಗಮ್ಮ ಜಾತ್ರೆ ಜೊತೆಗೆ ವಿನೋಭ ನಗರ ಚೌಡೇಶ್ವರಿ ಜಾತ್ರೆ, ಶಿವಮೊಗ್ಗದ ಮಾರಿಕಾಂಬಾ ಜಾತ್ರೆ ಸೇರಿ ಇನ್ನು ಹಲವು ಊರುಗಳಲ್ಲಿ ದೇವಿ ಜಾತ್ರೆ ನಡೆಸಲಾಗುತ್ತಿರುವುದರಿಂದ ಈ ಬಾರಿ ಕುರಿಗಳಿಗೆ ಬಾರಿ ಡಿಮ್ಯಾಂಡ್ ಬಂದಿದೆ. ಕುರಿಯ ಆರೋಗ್ಯ, ದಷ್ಟಪುಷ್ಟತೆ, ಕೊಬ್ಬಿನಾಂಶದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಕಳೆದ ಬಾರಿಯ ಜಾತ್ರೆ ಸಮಯದಲ್ಲಿದ್ದ ಕುರಿ ದರಕ್ಕೆ ಹೋಲಿಸಿದರೆ ಈ ಬಾರಿ ಕುರಿ ದರ ಹೆಚ್ಚಿದೆ.
ಕುರಿ ಬೆಲೆ ಏರಿಕೆ :
ಈ ಹಿಂದಿನ ಹಬ್ಬದಲ್ಲಿ 10 ಕೆಜಿಯೊಳಗೆ ತೂಗುವ ಕುರಿ ದರ4-5 ಸಾವಿರ ರೂ ಇತ್ತು. ಈ ಬಾರಿ 6 ರಿಂದ 7 ಸಾವಿರ ರೂ. ಆಗಿದೆ. ಅಂತೆಯೇ 20 ಕೆಜಿ ಮಾಂಸ ಸಿಗಬಹುದಾದ ಕುರಿ ಬೆಲೆ ಕಳೆದ ಬಾರಿ 12-15 ಸಾವಿರ ಇತ್ತು. ಆದರೆ ಈ ಬಾರಿ 15-17 ಸಾವಿರ ರೂಗೆ ಏರಿಕೆಯಾಗಿದೆ. 30-35 ಕೆಜಿ ತೂಕವುಳ್ಳ ಕುರಿ ಬೆಲೆ ಕಳೆದ ಬಾರಿ 25 ಸಾವಿರ ದಾಟಿದ್ದು, ಪ್ರಸ್ತುತ 30 ಸಾವಿರ ರೂಗಳಿಗೆ ಮಾರಾಟವಾಗಿದೆ.
ದುಗ್ಗಮ್ಮ ಜಾತ್ರೆಗೆ ಸಿಂಗಾರಗೊಳ್ಳುತ್ತಿರುವ ದೇವಸ್ಥಾನ :
ದುಗ್ಗಮ್ಮ ದೇವಿ ಜಾತ್ರೆಗೆ ಇನ್ನು ಒಂದೇ ದಿನ ಬಾಕಿ ಇದ್ದು ಸಕಲ ಸಿದ್ದತೆಗಳು ನಡೆಯುತ್ತಿವೆ. ದೇವಸ್ಥಾನವನ್ನು ಶೃಂಗರಿಸುವುದು, ಲೈಟಿಂಗ್ ಅಳವಡಿಕೆ, ಜಾತ್ರೆಗೆ ಬರುವ ಮತ್ತು ಹೋಗುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ರಸ್ತೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ನೀರು ಇತ್ಯಾದಿ ಮೂಲಭೂತ ಸೌಕರ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನದ ಆವರಣದಲ್ಲಿ ಕಾರ್ಯಗಳು ನಡೆಯುತ್ತಿವೆ. ಇನ್ನೂ ಈಗಿನಿಂದಲೇ ದೇವಸ್ಥಾನಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ದುಗ್ಗಮ್ಮ ಜಾತ್ರೆಗೆಂದೇ ನಾವು ಮೂರು ಕುರಿಗಳನ್ನು ನಾಯಕನಹಟ್ಟಿ ಗ್ರಾಮದಿಂದ ತಂದಿದ್ದೇವೆ. 20 ಕೆಜಿಯ ಕುರಿವೊಂದಕ್ಕೆ 17-18 ಸಾವಿರ ರೂ. ಕೊಟ್ಟು ತಂದಿದ್ದೇವೆ. ಕುರಿ ದರ ಹೆಚ್ಚಿದೆ, ಇದರ ಮಧ್ಯೆ ದಲ್ಲಾಳಿಗಳು ಸಹ ದರ ಏರಿಸಿ ಲಾಭ ಗಳಿಕೆಗೆ ಯೋಚಿಸುತ್ತಾರೆ. ಇದರಿಂದ ರೈತರಿಗೆ ನಷ್ಟ ಸಂಭವಿಸುತ್ತದೆ.
ಸುನೀಲ್ ಕುಮಾರ್, ನಿಟುವಳ್ಳಿ ನಿವಾಸಿ