ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ಇಂದು ಇಸ್ಲಾಮಾಬಾದಿನ ಹೈಕೋರ್ಟ್ ಹೊರಗೆ ಪಾಕಿಸ್ತಾನದಲ್ಲಿ ಅರೆಸೈನಿಕ ಫೆಡರಲ್ ಕಾನೂನು ಜಾರಿ ದಳ ರೇಂಜರ್ಸ್ ನಿಂದ ಅವರ ಬಂಧನವಾಗಿದೆ ಎಂದು ಪಾಕಿಸ್ತಾನ ಡಾನ್ ನ್ಯೂಸ್ ವರದಿ ಮಾಡಿದೆ.
ಇಮ್ರಾನ್ ಖಾನ್ ಅವರನ್ನು ತೋಷಖಾನಾ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಸ್ಲಾಮಾಬಾದ್ ಪೊಲೀಸರು ಪದಚ್ಯುತ ಪ್ರಧಾನಿಯ ಬಂಧನ ವಾರಂಟ್ ನೊಂದಿಗೆ ಕಳೆದ ತಿಂಗಳು ಲಾಹೋರ್ ಗೆ ಬಂದು ತಲಾಶ್ ಮಾಡಿದ್ದರು.
ಫೆಬ್ರುವರಿ 28 ರಂದು ಫೆಡರಲ್ ರಾಜಧಾನಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಖಾನ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಆಗಸ್ಟ್ 20 ರಂದು ಎಫ್ -9 ಪಾರ್ಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಝೀಬಾ ಚೌಧರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿತ್ತು.
