ಬಡತನ ರೇಖೆಗಿಂತ ಕೆಳಗಿನವರಿಗೆ ಉಚಿತವಾಗಿ ಸೂರು ಕಲ್ಪಿಸಲು ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸುವಂತೆ ಶಾಸಕ ಶಾಮನೂರು ಶಿವಶಂಕರಪ್ಪನವರು ವಸತಿ ಸಚಿವರಾದ ವಿ.ಸೋಮಣ್ಣನವರಿಗೆ ಮನವಿ ಮಾಡಿದ್ದಾರೆ.
ಇಂದು ದಾವಣಗೆರೆಗೆ ಆಗಮಿಸಿದ ವಿ.ಸೋಮಣ್ಣನವರಿಗೆ ತಮ್ಮ ಮನವಿಯನ್ನು ಶಾಸಕರ ಬೆಂಬಲಿಗರೊಂದಿಗೆ ಸಲ್ಲಿಸಿರುವ ಪತ್ರದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯವರು ಗುರುತಿಸಿದಂತೆ ಸುಮಾರು 27 ಸಾವಿರ ವಸತಿ ರಹಿತ ಫಲಾನುಭವಿಗಳಿದ್ದು, ಈ ಫಲಾನುಭವಿಗಳಿಗೆ ಸೂರು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ತಿಳಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ವತಿಯಿಂದ ಸುಮಾರು 105 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಹಿಂದಿನ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 41 ಎಕರೆ ಖರೀದಿಸಲಾಗಿದೆ. ಇನ್ನು 19 ಎಕರೆ 16 ಗುಂಟೆ ಜಮೀನು ಖರೀದಿಗೆ ಮಂಜೂರಾತಿ ಪತ್ರ ಸಿಕ್ಕಿದ್ದು, ಅನುದಾನ ಬಿಡುಗಡೆ ಆಗಬೇಕಿದೆ.
ಮತ್ತೆ 45 ಎಕರೆ ಖರೀದಿಗೆ ಜಿಲ್ಲಾಧಿಕಾರಿಗಳಿಂದ ತಮ್ಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ನೀಡಬೇಕಾಗಿದೆ. ಈ ಜಮೀನುಗಳಲ್ಲಿ ಬಹುಮಹಡಿ ವಸತಿ ಯೋಜನೆಯಡಿ ಸುಮಾರು 15-18 ಸಾವಿರ ಮನೆಗಳನ್ನು ಬಡತನ ರೇಖೆಗಿಂತ ಕೆಳಗಿನವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಉಪಯೋಗಿಸಿಕೊಂಡು ಉಚಿತವಾಗಿ “ಸೂರು” ಕಲ್ಪಿಸಬಹುದು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅದೇ ರೀತಿ ಕೊಳೆಗೇರಿ ಪ್ರದೇಶಗಳಲ್ಲಿ ಅರ್ಹರಿಗೆ ಹಕ್ಕುಪತ್ರ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಕಾಂಗ್ರೆಸ್ ಸದಸ್ಯರಿಂದಲೂ ಮನವಿ: ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ಅಬ್ದುಲ್ ಲತೀಫ್, ಜಿ.ಎಸ್.ಮಂಜುನಾಥ್, ಕೆ.ಚಮನ್ ಸಾಬ್, ಮಂಜುನಾಥ್ ಇಟ್ಟಿಗುಡಿ ಅವರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಚಿವರನ್ನು ಭೇಟಿ ಮಾಡಿ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸಹಾಯಧನ ದೊರಕುತ್ತಿದ್ದು, ರಾಜ್ಯ ಸರ್ಕಾರದ ಸಹಾಯಧನ ಸುಮಾರು 2 ವರ್ಷಗಳಿಂದ ಬಿಡುಗಡೆ ಆಗಿರುವುದಿಲ್ಲ ಇದರಿಂದ ಅರ್ಹ ಫಲಾನುಭವಿಗಳಿಗೆ ತೊಂದರೆ ಆಗುತ್ತಿದ್ದು ಈ ಬಗ್ಗೆ ತಾವು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.