ಒಂದು ವರ್ಷದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ಸಿಟಿ ಕಾಮಗಾರಿಗಳ ಲೋಕಾರ್ಪಣೆ

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳನ್ನು ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ (ಭೈರತಿ) ಲೋಕಾರ್ಪಣೆಗೊಳಿಸಿದರು.
ಮಂಗಳವಾರ ನಗರದಲ್ಲಿ ಸ್ಮಾರ್ಟ್ಸಿಟಿ ಲಿ., ವತಿಯಿಂದ ಪೂರ್ಣಗೊಳಿಸಲಾದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಲ್ಲಿ ಶೇ.70 ರಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಶೇ.30 ರಷ್ಟು ಕಾಮಗಾರಿಗಳನ್ನು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

.
ಮುಖ್ಯಮಂತ್ರಿಗಳು ಇತ್ತೀಚಿಗೆ ಎಲ್ಲಾ ಜಿಲ್ಲೆಗಳ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸ್ಮಾರ್ಟ್ಸಿಟಿ ಕಾಮಗಾರಿಗಳನ್ನು ಇನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಕೈಗೆತ್ತಿಕೊಳ್ಳಲಾದ ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ, ಇನ್ನು ಕೆಲವೇ ಕಾಮಗಾರಿಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲೇ ಅವುಗಳನ್ನು ಪೂರ್ಣಗೊಳಿಸಲಾಗುವುದು. ನಗರದೆಲ್ಲೆಡೆ ಸುರಕ್ಷತೆ, ನಿಯಂತ್ರಣ ಹಾಗೂ ಸಂಚಾರ ವ್ಯವಸ್ಥೆ ಸುಸೂತ್ರಗೊಳಿಸಲು ಐಸಿಟಿ ಯೋಜನೆಯಲ್ಲಿ ಸಿಸಿ ಕ್ಯಾಮರ ಅಳವಡಿಕೆ, ಪಿ.ಎ.ಎಸ್., ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಹಾಗೂ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳನ್ನು ರೂ.85.41 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ, ಇದರಿಂದ ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ನೆರವಾಗಲಿದೆ ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಜ್ಯದ 33 ಲಕ್ಷ ರೈತರಿಗೆ ರೂ.24 ಸಾವಿರ ಕೋಟಿ ಸಾಲ ಒದಗಿಸಲು ನಿರ್ಧರಿಸಲಾಗಿದೆ. ಇದರಲ್ಲಿ ವಿಶೇಷವಾಗಿ 03 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗುವುದು. ಸಾಲ ನೀಡುವ ಕುರಿತಂತೆ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದವಿಲ್ಲ, ಎಸ್‌ಸಿ-ಎಸ್‌ಟಿ ವರ್ಗದವರನ್ನು ಒಳಗೊಂತೆ ಯಾರಿಗೆ ಎಷ್ಟು ಸಾಲ ಒದಗಿಸಬೇಕು ಎಂಬುದರ ಕುರಿತು ನಿರ್ದೇಶನ ನೀಡಲಾಗಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ “ಯಶಸ್ವಿನಿ ಯೋಜನೆ”ಯನ್ನು ಪುನಃ ಜಾರಿ ಮಾಡುವುದರ ಕುರಿತು ಸಹಕಾರ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸೇರಿದಂತೆ ಇತರರು ಹಾಜರಿದ್ದರು.
ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಪ್ರಮುಖ ಯೋಜನೆಗಳು:ಸ್ಮಾರ್ಟ್ಸಿಟಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದಾವಣಗೆರೆ ನಗರವು 2016 ರಲ್ಲಿ ಮೊದಲನೇ ಹಂತದಲ್ಲಿ ಆಯ್ಕೆಯಾಗಿರುತ್ತದೆ, ಈ ಯೋಜನೆಯು 5 ವರ್ಷಗಳ ಅವಧಿಯದ್ದಾಗಿದ್ದು, ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದ ಪಾಲು 50-50ರ ಅನಾಪಾತದಲ್ಲಿರುತ್ತದೆ. ದಾವಣಗೆರೆ ಸ್ಮಾರ್ಟ್ಸಿಟಿ ಯೋಜನೆಯಡಿ ಒಟ್ಟಾರೆ ರೂ.1,074 ಕೋಟಿಗಳ ಯೋಜನಾ ಮೊತ್ತದಲ್ಲಿ 115 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದುವರೆಗೂ ರೂ.807 ಕೋಟಿಗಳು ಬಿಡುಗಡೆಯಾಗಿರುತ್ತದೆ.

2022 ರ ಮೇ ಅಂತ್ಯಕ್ಕೆ ಒಟ್ಟು ಯೋಜನಾ ವೆಚ್ಚ ರೂ.620.51 ಕೋಟಿಗಳಾಗಿದ್ದು, 72 ಕಾಮಗಾರಿಗಳು ಪೂರ್ಣಗೊಂಡಿವೆ, ಉಳಿದ 43 ಕಾಮಗಾರಿಗಳು ವಿವಿಧ ನಿರ್ಮಾಣ ಹಂತದಲ್ಲಿರುತ್ತವೆ.
ಮಳೆಗಾಲದಲ್ಲಿ ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಸ್ಮಾರ್ಟ್ಸಿಟಿ ಯೋಜನೆಯಲ್ಲಿ ರೂ.118.90 ಕೋಟಿ ವೆಚ್ಚದಲ್ಲಿ 10 ಯೋಜನೆಗಳ ಮುಖಾಂತರ ಸುಮಾರು 51.31 ಕಿ.ಮೀ. ಉದ್ದದ ಮುಖ್ಯ ಚರಂಡಿಗಳನ್ನು ಅಭಿವೃದ್ಧಿಪಡಿಸಲು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ 42.29 ಕಿ.ಮೀ.ಗಳಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ದಾವಣಗೆರೆ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವರ್ತುಲ ರಸ್ತೆ, ಸ್ಮಾರ್ಟ್ ರಸ್ತೆಗಳು, ಪುಟ್‌ಪಾತ್ ಅಭಿವೃದ್ಧಿ, ಜಂಕ್ಷನ್ ಅಭಿವೃದ್ಧಿ, ರಸ್ತೆಯ ಮಾರ್ಕಿಂಗ್, ಸೈನ್ ಬೋರ್ಡ್ ಅಳವಡಿಕೆ ಸೇರಿದಂತೆ ಒಟ್ಟಾರೆ 17 ಕಾಮಗಾರಿಗಳ ಮುಖಾಂತರ ರೂ.231.69 ಕೋಟಿಗಳಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತವೆ.

ಸ್ಮಾರ್ಟ್ಸಿಟಿ ಯೋಜನೆಯಡಿ ನಗರಕ್ಕೆ ಎ.ಡಿ.ಬಿ. ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ನಿರಂತರ (24/7) ಕುಡಿಯುವ ನೀರು ಸರಬರಾಜು ಯೋಜನೆಯ ಯಶಸ್ಸಿಗೆ ಅವಶ್ಯವಿರುವ ನೀರಿನ ಮೂಲವನ್ನು ಶಾಶ್ವತವಾಗಿ ಬಲಪಡಿಸಲು ತುಂಗಭದ್ರಾ ನದಿಗೆ ಅಡ್ಡಲಾಗಿ ರೂ.91.86 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ನಗರದಲ್ಲಿ 3 ಬಸ್ ನಿಲ್ದಾಣಗಳ ಪುನರ್ ನಿರ್ಮಾಣ ಹಾಗೂ 1 ಹೊಸ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗಳನ್ನು ರೂ.162.00 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಕೆ.ಆರ್.ರಸ್ತೆಯಲ್ಲಿನ ಬಸ್ ನಿಲ್ದಾಣದ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಮಂಡಕ್ಕಿ ಭಟ್ಟಿ ಮತ್ತು 4 ಆಶ್ರಯ ಬಡಾವಣೆಗಳ ಸಂಪೂರ್ಣ ಅಭಿವೃದ್ಧಿಯನ್ನು ರೂ.55.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

ಸರ್ಕಾರಿ ಬಿ.ಡಿ.ಟಿ ಇಂಜಿನಿಯರಿಗ್ ಕಾಲೇಜಿನಲ್ಲಿ ಆರ್ ಮತ್ತು ಡಿ ಸೆಂಟರ್ ಕಾಮಗಾರಿಯನ್ನು ರೂ. 4.50 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.
ಇವುಗಳಲ್ಲದೇ ವಿದ್ಯುತ್ ಚಿತಾಗಾರ ಕಾಮಗಾರಿ, ಕುಂದುವಾಡ ಕೆರೆಯ ಅಭಿವೃದ್ಧಿ, ಪಾರ್ಕ್ಗಳಲ್ಲಿ ಜಿಮ್ ಸಾಮಗ್ರಿಗಳ ಅಳವಡಿಕೆ, ಗ್ಲಾಸ್‌ಹೌಸ್‌ನಲ್ಲಿ ಲೇಸರ್ ಶೋ ಕಾಮಗಾರಿ, ಪುಷ್ಕರಣಿ ಕಾಮಗಾರಿ, ಕಲಾ ಕಾಲೇಜಿನಲ್ಲಿ ಬಯಲು ರಂಗ ಮಂದಿರ ಮತ್ತು ಥೀಮ್‌ಪಾರ್ಕ್ ನಿರ್ಮಾಣ ಸೇರಿದಂತೆ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಗರದ ಸರ್ವತೋಮುಖ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!