ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಣೆ ನಿಷೇಧ – ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

IMG-20210817-WA0021

 

ದಾವಣಗೆರೆ: ಮುಂಬರುವ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದೆ ಕೋವಿಡ್ ನಿಯಮಾವಳಿಗಳನ್ವಯ ಸರಳವಾಗಿ, ಸೌಹರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಮಂಗಳವಾರ ಏರ್ಪಡಿಸಿದ ನಾಗರಿಕ ಸೌಹಾರ್ದ ಸಮನ್ವಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೋವಿಡ್-19 ಮಾರ್ಗಸೂಚಿಯನ್ವಯ ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಜಾತ್ರೆ, ವಿಶೇಷ ಪೂಜೆ, ಸಭೆ, ಸಮಾರಂಭ, ಮೆರವಣಿಗೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಲ್ಲಿಯವರೆಗೂ ಬಂದ ಎಲ್ಲಾ ಹಬ್ಬ-ಮಹೋತ್ಸವಗಳನ್ನು ಕೋವಿಡ್ ಮಾರ್ಗಸೂಚಿಯನ್ವಯ ಆಚರಿಸಲಾಗಿದೆ ಎಂದರು.

ಕೋವಿಡ್ ಮೂರನೇ ಅಲೆಯನ್ನು ತಪ್ಪಿಸಬೇಕಾದರೆ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಜನಜಂಗುಳಿ ಇರುವ ಕಡೆ ಹೋಗುವುದನ್ನು ತಪ್ಪಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆಗಾಗ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಬೇಜವಾಬ್ದಾರಿಯಿಂದ ಕೋವಿಡ್ ಸೋಂಕನ್ನು ನಿರ್ಲಕ್ಷಿಸಿ, ಜಿಲ್ಲಾಡಳಿತಕ್ಕೂ ಹೊರೆ ಮಾಡದೆ, ನಿಮ್ಮ ಕುಟುಂಬದವರಿಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಮನವಿ ಮಾಡಿದರು.

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪೊಲೀಸರ ಭಯದಿಂದ ಮಾಸ್ಕ್ ಹಾಕಿಕೊಳ್ಳದೇ ನಿಮ್ಮ ಜೀವನದ ಸುರಕ್ಷತೆಗಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಈಗಾಗಲೇ ರಾಜ್ಯ ಸರ್ಕಾರ ಮೊಹರಂ ಹಾಗೂ ಗಣೇಶ ಚತುರ್ಥಿ ಹಬ್ಬಗಳಿಗಾಗಿ ವಿಶೇಷ ಮಾರ್ಗಸೂಚಿ ಹೊರಡಿಸಿದ್ದು, ಜನರು ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡದೆ ತಮ್ಮ ಮನೆಗಳಲ್ಲೆ ಸರಳವಾಗಿ ಹಬ್ಬ ಆಚರಿಸಿ ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಜನರಿಗೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಲು ತಿಳುವಳಿಕೆ ನೀಡಬೇಕು. ಮೊಹರಂ ಹಬ್ಬದ ಪ್ರಯುಕ್ತ ಸ್ವಚ್ಚತೆ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು. ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಈಗಾಗಲೇ 30 ಕಡೆ ಸ್ಥಳ ನಿಗದಿಪಡಿಸಲಾಗಿದೆ. ಹೊರವಲಯದಲ್ಲಿ ಬಾತಿ ಕೆರೆ ಹಾಗೂ ಶಿರಮಗೊಂಡನಹಳ್ಳಿ ಬಳಿ ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿಯೇ ವಿಸರ್ಜನೆ ಮಾಡಬೇಕು ಎಂದರು.

ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್ ಮಾತನಾಡಿ, ಕೋವಿಡ್-19 ಸೋಂಕನ್ನು ಸಮರ್ಥವಾಗಿ ಎದುರಿಸಬೇಕಾದರೆ ಹಬ್ಬ-ಹರಿದಿನಗಳನ್ನು ಸಾಮಾಜಿಕವಾಗಿ ಆಚರಿಸದಂತೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಯಾವುದೇ ದೇವರು, ಭಕ್ತಿ ಮತ್ತು ಸೇವೆಯನ್ನು ಆಪೇಕ್ಷಿಸುತ್ತಾರೆಯೇ ಹೊರತು ಆಡಂಬರವನ್ನಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೊನ ಸೋಂಕಿನೊಂದಿಗೆ ಚಿಕನ್‌ಗುನ್ಯ, ಡೆಂಗ್ಯೂ ನಂತಹ ರೋಗಗಳು ಪತ್ತೆಯಾಗುತ್ತಿರುವುದರಿಂದ ಸಾರ್ವಜನಿಕರು ಸ್ವಚ್ಛತೆಯತ್ತ ಗಮನಹರಿಸಬೇಕು, ಪಾಲಿಕೆಯೊಂದಿಗೆ ಜನರ ಸಹಭಾಗಿತ್ವವು ಅತಿ ಮುಖ್ಯ ಎಂದರು.

ಪರಿಸರ ಇಲಾಖೆ ಅಧಿಕಾರಿ ಸಂತೋಷ್ ಮಾತನಾಡಿ, ಗಣೇಶ ಹಬ್ಬದಲ್ಲಿ ಸಾರ್ವಜನಿಕ ಆಚರಣೆಗೆ ನಿಷೇಧವಿದ್ದು, ಸಾರ್ವಜನಿಕರು ಒಂದು ಅಡಿಗಿಂತ ಎತ್ತರದ ಗಣಪತಿ ಮೂರ್ತಿಗಳನ್ನು ಕೂರಿಸಬಾರದು. ಪಿಒಪಿ, ಪ್ಲಾಸ್ಟಿಕ್ ಗಣಪ ಮೂರ್ತಿ ಬಳಕೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಅರಿಶಿಣದಿಂದ ಗಣಪತಿ ಮೂರ್ತಿ ತಯಾರಿಸಿ, ಮನೆಯಲ್ಲೇ ವಿಸರ್ಜನೆ ಮಾಡಿ, ನೀರನ್ನು ಮರ, ಗಿಡಗಳಿಗೆ ಹಾಕಿ. ಅಥವಾ ಪಾಲಿಕೆಯಿಂದ ನಿರ್ಮಿಸಲಾಗಿರುವ ತಾತ್ಕಾಲಿಕ ತೊಟ್ಟಿಗಳಲ್ಲಿ ವಿಸರ್ಜನೆ ಮಾಡಿ. ಇದರಿಂದ ಪರಿಸರದ ಸಮತೋಲನ ಕಾಯ್ದುಕೊಳ್ಳಬಹುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!