ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ಸೌಲಭ್ಯಕ್ಕೆ ಅರ್ಹರು: ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ – ಡಿಸಿ

ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ಸೌಲಭ್ಯಕ್ಕೆ ಅರ್ಹರು: ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ - ಡಿಸಿ

ದಾವಣಗೆರೆ: ಲಿಂಗತ್ವ ಅಲ್ಪಸಂಖ್ಯಾತ ಜನರು ಸರ್ಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕೆಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಯೋಜನೆಗಳ ಮಾಹಿತಿಯನ್ನು ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ವಿಶೇಷ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರರಿಗೆ ಸೌಲಭ್ಯ ಕಲ್ಪಿಸುವ ಉಸ್ತುವಾರಿ ಸಮಿತಿ ಸಭೆ ಮತ್ತು ದಮನಿತ ಮಹಿಳೆಯರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಅಭಯಸ್ಪಂದನ ಸಂಸ್ಥೆಯಲ್ಲಿ ಒಟ್ಟು 1092 ಲಿಂಗತ್ವ ಅಲ್ಪಸಂಖ್ಯಾತರು ನೊಂದಾಯಿಸಿದ್ದಾರೆ. ಇದರಲ್ಲಿ ಲಿಂಗತ್ವ ಬದಲಾದವರು 127 ಜನರಿದ್ದಾರೆ. ಸಂಸ್ಥೆಯಲ್ಲಿ ನೊಂದಾಯಿತರಾದವರಲ್ಲಿ ಎಂಎಸ್‍ಎಂ ಸಂಖ್ಯೆ 965 ಇದ್ದು 146 ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. 1092 ಜನರಿಗೆ ಆಧಾರ್ ಕಾರ್ಡ್ ಮತ್ತು 1088 ಜನರು ಪಡಿತರ ಚೀಟಿ ಹೊಂದಿದ್ದಾರೆ.

ಇದರಲ್ಲಿ 25 ಜನರಿಗೆ ಆಧಾರ್, ಪಡಿತರ ಚೀಟಿ ಇಲ್ಲವೆಂದು ತಿಳಿಸಿದ್ದು ಮೊದಲಿದ್ದ ಹೆಸರಿನ ಬದಲಾಗಿ ಈಗಿನ ಹೆಸರಿಗೆ ಆಧಾರ್ ತಿದ್ದುಪಡಿಯಾಗಬೇಕಾಗಿದೆ. ಲಿಂಗತ್ವ ಅಲ್ಪಸಂಖ್ಯಾತರರಿಗೆ ಆಧಾರ್ ತಿದ್ದುಪಡಿ ಮಾಡಲು ಒಂದು ದಿನ ಮೀಸಲಿರಿಸಿ ಮಾಡಿಸಲಾಗುತ್ತದೆ. ಮತ್ತು ಯಾರಿಗೆ ಮತದಾನ ಗುರುತಿನ ಚೀಟಿ ಇಲ್ಲ, ಅಂತಹವರಿಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ಸೌಲಭ್ಯಕ್ಕೆ ಅರ್ಹರು: ಮಾರ್ಗದರ್ಶನಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ - ಡಿಸಿ

 ಲಿಂಗತ್ವ ಅಲ್ಪಸಂಖ್ಯಾತರರಿಗೆ ಸೌಲಭ್ಯ; ನಗರ, ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಮತ್ತು ಸ್ವಯಂ ಉದ್ಯೋಗಕ್ಕಾಗಿ ಸಾಲ, ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಲಿಂಗತ್ವ ಅಲ್ಪಸಂಖ್ಯಾತರರು ಸೇರಿ ಸ್ವ ಸಹಾಯ ಸಂಘಗಳನ್ನು ಮಾಡಿಕೊಳ್ಳುವ ಮೂಲಕ ಗುಂಪು ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.

ಮತ್ತು ನಿವೇಶನ ಇಲ್ಲದವರಿಗೆ ನಿವೇಶನ ಮತ್ತು ನಿವೇಶನ ಹೊಂದಿದವರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಿಮಗೆ ಬೇಕಾದ ಸೌಲಭ್ಯ ಪಡೆಯಲು ಮಾಹಿತಿ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ನೇಮಕ ಮಾಡುವಾಗ ಲಿಂಗತ್ವ ಅಲ್ಪಸಂಖ್ಯಾತರರಿಗೂ ಅವಕಾಶ ಇರುತ್ತದೆ. ತಾವುಗಳು ಸಹ ಇತರರೊಂದಿಗೆ ಸ್ಪರ್ಧೆ ಮಾಡಬಹುದಾಗಿದೆ ಎಂದರು.

ಕಳೆದ ವರ್ಷ 26 ಜನರಿಗೆ ತಲಾ 30 ಸಾವಿರದಂತೆ ಪ್ರೋತ್ಸಾಹಧನ ನೀಡಲಾಗಿದ್ದು ಉದ್ಯೋಗಿನಿ ಯೋಜನೆಯಡಿ 2 ಪಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈ ವರ್ಷ ಗುರಿಯನ್ನು ಹೆಚ್ಚಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದರು.

ಲಿಂಗತ್ವ ಅಲ್ಪಸಂಖ್ಯಾತರರು ಸಭೆಯಲ್ಲಿ ಮಾತನಾಡಿ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆಯನ್ನು ಪಡೆಯಲು ಆಧಾರ್‍ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಂದಿಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ನಮಗೆ ಮನೆ ಇಲ್ಲ, ಬಾಡಿಗೆಯನ್ನು ನೀಡುವುದಿಲ್ಲ, ಸೂರು ಕೇಳಿದರೆ ನೂರು ಸಮಸ್ಯೆ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೂರು ಬಹಳ ಮುಖ್ಯವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ದಮನಿತ ಮಹಿಳೆಯರ ಸಂರಕ್ಷಣಾ, ಪುನಶ್ಚೇತನ ಮತ್ತು ದಮನತಡೆಗೆ ಕ್ರಮ; ಜಿಲ್ಲೆಯಲ್ಲಿ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಸ್ಥೆಯಲ್ಲಿ 4354 ದಮನಿತ ಮಹಿಳೆಯರು ನೊಂದಾಯಿಸಿದ್ದಾರೆ. ಇವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾನ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ. ಇದರಲ್ಲಿ ನಗರ ಪ್ರದೇಶದಲ್ಲಿನ 333 ಮತ್ತು ಗ್ರಾಮೀಣ ಪ್ರದೇಶದಲ್ಲಿ 760 ಜನರು ಸ್ವಂತ ನಿವೇಶನ ಹೊಂದಿದ್ದಾರೆ. ನಿವೇಶನ ಹೊಂದಿದವರಿಗೆ ಹಂತ ಹಂತವಾಗಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಚೇತನ ಯೋಜನೆಯಡಿ 21 ಜನರಿಗೆ ತಲಾ 30 ಸಾವಿರ ಪ್ರೋತ್ಸಾಹಧನ ನೀಡಲಾಗಿದೆ.

ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿಕೊಳ್ಳುವ ಮೂಲಕ ಸ್ವ ಉದ್ಯೋಗ ಕೈಗೊಳ್ಳಲು ಜಿಲ್ಲಾಧಿಕಾರಿಯವರು ತಿಳಿಸಿದರು. ಗ್ರಾಮೀಣ ಪ್ರದೇಶದ ಗುಂಪುಗಳಿಗೆ ಜಿಲ್ಲಾ ಪಂಚಾಯತ್‍ನಿಂದ ಮತ್ತು ಪಟ್ಟಣ, ನಗರ ಪ್ರದೇಶದ ಸ್ವ ಸಹಾಯ ಗುಂಪುಗಳಿಗೆ ನಲ್ಮ್ ಯೋಜನೆಯಡಿ ಸೌಲಭ್ಯ ಕಲ್ಪಸಲು ಅವಕಾಶ ಇದ್ದು ಇದರ ಲಾಭ ಪಡೆದು ತಾವುಗಳು ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ಈ ವೇಳೆ ದಮನಿತ ಮಹಿಳೆಯರು ಪೊಲೀಸ್ ಸಿಬ್ಬಂದಿಯು ನಮಗೆ ಕಿರುಕುಳ ನೀಡುತ್ತಾರೆ, ಅವರು ಕೇಳಿದಷ್ಟು ಹಣ ಕೊಡಬೇಕಾದ ಪರಿಸ್ಥಿತಿ ಇದೆ ಎಂದಾಗ ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ ಮಾತನಾಡಿ ಯಾರು ಈ ತರಹ ಹಣ ಸುಲಿಗೆ ಮಾಡುತ್ತಾರೆ ಎಂಬುದನ್ನು ನನಗೆ ಖಚಿತವಾದ ಮಾಹಿತಿ ನೀಡಿ ಕ್ರಮ ಜರುಗಿಸಲಾಗುತ್ತದೆ.

ದಮನಿತ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿ ಪುನರ್ವಸತಿ ಕಲ್ಪಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವುದು ಸಲಹಾ ಸಮಿತಿಯ ಉದ್ದೇಶವಾಗಿದೆ. ಸರ್ಕಾರದಿಂದ ನಿಮಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ.ಕರೆಣ್ಣನವರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಸಭೆಗೆ ವಿವರವನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!