ಮಹಿಳಾ ದೌರ್ಜನ್ಯ ತಡೆಗೆ ಹೆಚ್ಚಿನ ಕ್ರಮ ವಹಿಸಿ: ಶಿವಾನಂದ ಕಾಪಶಿ

ಮಹಿಳಾ ದೌರ್ಜನ್ಯ ತಡೆಗೆ ಹೆಚ್ಚಿನ ಕ್ರಮ ವಹಿಸಿ: ಶಿವಾನಂದ ಕಾಪಶಿ

ದಾವಣಗೆರೆ: ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಉಂಟಾದಾಗ ಕಾನೂನಿನ ಮುಖಾಂತರ ಅವರಿಗೆ ರಕ್ಷಣೆ ಹಾಗೂ ನೆರವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ರಡಿ ಜಿಲ್ಲಾ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005ರಡಿ ಪ್ರಕರಣ ದಾಖಲಿಸಿಕೊಂದು ಅವರಿಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುವಂತೆ ಮಾಡಬೇಕು. ಕೌಟುಂಬಿಕ ದೌರ್ಜನ್ಯದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಮಹಿಳೆಯರಿಗೆ ಇರುವ ಕಾನೂನುಗಳ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಮಾಹೆಯಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ 18 ಪ್ರಕರಣಗಳು ದಾಖಲಾಗಿದ್ದು, ಸಿ.ಡಿ.ಪಿ.ಓ ಕಚೇರಿಯಲ್ಲಿ 7, ನ್ಯಾಯಾಲಯದಲ್ಲಿ 10 ಪ್ರಕರಣಗಳು ಸೇರಿದಂತೆ ಒಟ್ಟು 35 ಪ್ರಕರಣಗಳು ಇರುತ್ತವೆ. ಇದರಲ್ಲಿ 8 ಪ್ರಕರಣಗಳು ಇತ್ಯರ್ಥವಾಗಿ, ಇನ್ನು 27 ಪ್ರಕರಣಗಳು ಬಾಕಿ ಇದ್ದು, ಅವುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಹಾಗೂ ಅವರಿಗೆ ಕಾನೂನಿನ ಅರಿವು ಮೂಡಿಸಲು ಅದಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಗೆ ಪೌಷ್ಠಿಕಾಂಶದ ಕೊರತೆಯಾಗಬಾರದು, ಅಂಗನವಾಡಿ ಕೇಂದ್ರಗಳಿಂದ ಪೌಷ್ಠಿಕಾಂಶಯುಕ್ತ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಅವರು ಸದೃಢ ಆರೋಗ್ಯ ಹೊಂದುವಂತೆ ಮಾಡಬೇಕು.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಇರುವ ನಿಯಮಗಳು, ಶಿಕ್ಷೆಗಳ ಕುರಿತು ಪೋಷಕರಿಗೆ ಅರಿವು ಮೂಡಿಸಲು ಹಾಗೂ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ2006 ರಡಿ  2023 ರ ಎಪ್ರಿಲ್ ನಿಂದ ಜೂನ್ ಮಾಹೆ ಅಂತ್ಯಕ್ಕೆ ಒಟ್ಟು 23 ಪ್ರಕರಣಗಳು ದಾಖಲಾಗಿದ್ದು, 21 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 2 ಬಾಲ್ಯ ವಿವಾಹಗಳು ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಿಸಲಾಗಿದೆ.

ನಗರದ ಎಂ.ಸಿ.ಸಿ ಬಿ ಬ್ಲಾಕ್‍ನಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ 1989 ರಲ್ಲಿ ಪ್ರಾರಂಭವಾದ ಸ್ನೇಹಾಲಯ ಎಂಬ ವಸತಿ ಗೃಹವಿದ್ದು, ಪ್ರಸ್ತುತ 18 ನಿವಾಸಿಗಳು ದಾಖಲಾಗಿದ್ದಾರೆ. 1989 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ನಂತರ ಯಾವುದೇ ಹಣ ಸಂಸ್ಥೆಗೆ ಬಿಡುಗಡೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೋಲೀಸ್ ವರಿಷ್ಠಧಿಕಾರಿ ಕೆ. ಅರುಣ್, ಜಿಲ್ಲಾ ಪಂಚಾಯತ್ ಸಿ.ಇ.ಒ ಸುರೇಶ್ ಕೆ.ಇಟ್ನಾಳ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ. ಮ. ಕರೆಣ್ಣವರ, ಡಿ.ಡಿ.ಪಿ.ಐ ತಿಪ್ಪೇಶಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಅಖೆ ಉಪನಿರ್ದೇಶಕ ನಾಗರಾಜ. ಕೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!