ಹಾಸನದ ಟಿಕೆಟ್ ಕಗ್ಗಂಟಿನಿಂದ ಹೆಚ್ ಡಿ ಕೆ ಓಟಕ್ಕೆ ಸ್ಪೀಡ್ ಬ್ರೇಕರ್.!

ಹಾಸನದ ಟಿಕೆಟ್ ಕಗ್ಗಂಟಿನಿಂದ ಹೆಚ್ ಡಿ ಕೆ ಓಟಕ್ಕೆ ಸ್ಪೀಡ್ ಬ್ರೇಕರ್.!

ಬೆಂಗಳೂರು: ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜನತಾದಳಕ್ಕೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ,?
ಚುನಾವಣಾ ಪರ್ವ ಆರಂಭವಾಗ್ತಿದ್ದ ಹಾಗೇ ರಾಜ್ಯದಲ್ಲಿ ಈ ಸಲವಾದ್ರೂ ಜೆಡಿಎಸ್ ಗೆ ಅದೃಷ್ಟ ಖುಲಾಯಿಸಬಹುದು ಅನ್ನೋ ಲೆಕ್ಕಾಚಾರಗಳು ಆರಂಭವಾಗಿತ್ತು. ರಾಷ್ಟ್ರೀಯ ಪಕ್ಷಗಳಿಗಿಂತಲೂ ಮುಂಚೆಯೇ ಜೆಡಿಎಸ್ ಚುನಾವಣಾ ರಣಕಣಕ್ಕೆ ಇಳಿದಾಗಿತ್ತು. ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೂ ಘೋಷಣೆ ಕೂಡಾ ಮಾಡಿ ಆಗಿತ್ತು. ಹಿಂದೆಂದೂ ಇಲ್ಲದ ರೀತಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪೂರ್ತಿಯಾಗಿ ಕರಾರುವಕ್ಕಾಗಿ ರೆಡಿ ಮಾಡಿ ಚುನಾವಣೆಗೆ ಇಳಿಸಲು ಕುಮಾರಸ್ವಾಮಿ ಸಿದ್ದತೆ ಮಾಡಿಕೊಂಡಿದ್ರು. ಜೆಡಿಎಸ್ ಪಕ್ಷವನ್ನು ಮುನ್ನಡೆಸಲು ಒಂದು ಸ್ಟ್ರ್ಯಾಟಜಿ ಟೀಂ ಕೂಡಾ ರೆಡಿಯಾಗಿತ್ತು. ಆ ಟೀಂ ಹಾಕಿಕೊಟ್ಟ ಯೋಜನೆಗಳ ಪ್ರಕಾರವೇ ಒಂದೊಂದಾಗಿ ಕಾರ್ಯಕ್ರಮಗಳನ್ನು ಮಾಡ್ತಾ ಒಂದೊಂದೇ ಮೆಟ್ಟಿಲುಗಳನ್ನು ಏರಲಾರಂಭಿಸಿತ್ತು.

ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಳೀಯ ನಾಯಕರ ಜೊತೆಗೂಡಿ, ನೀರಿನ ಮೂಲಗಳಿಂದ ಪವಿತ್ರ ಜಲ ಸಂಗ್ರಹ ಮಾಡಿ ಜಲಧಾರೆ ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಮಾಡಿ ಆಯಿತು. ಅಂತಿಮವಾಗಿ ನೆಲಮಂಗಲ ಬಳಿ ಬೃಹತ್ ಸಮಾವೇಶ ಮಾಡಿದ್ರು ನೋಡಿ ರಾಷ್ಟ್ರೀಯ ಪಕ್ಷಗಳೂ ಸಹಾ ತಿರುಗಿ ನೋಡಿದ್ದು ಆಗಲೇ… ಸುಮಾರು ಮೂರರಿಂದ ನಾಲ್ಕು ಲಕ್ಷ ಜನರನ್ನು ಸೇರಿಸಿ, ಮಾಡಿದ್ದ ಜೆಡಿಎಸ್ ನ ಅತಿದೊಡ್ಡ ಹಾಗೂ ವ್ಯವಸ್ಥಿತ ಕಾರ್ಯಕ್ರಮ ಅದಾಗಿತ್ತು. ನಾಡಿನ ನಾನಾ ಮೂಲೆಗಳಿಂದ ಗಂಗಾಜಲ ಸಂಗ್ರಹ ಮಾಡಿ ಅಂತಿಮವಾಗಿ ಅದನ್ನು ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಪ್ರತಿಷ್ಟಾಪಿಸಿ ಪ್ರತಿನಿತ್ಯ ಪೂಜೆ ಸಲ್ಲಿಸುವ ಮೂಲಕ ಒಂದು ಕಡೆ ಮತದಾರರನ್ನು ಭಾವನಾತ್ಮಕವಾಗಿ ತಲುಪುವ ಪ್ರಯತ್ನವನ್ನು ಜೆಡಿಎಸ್ ಮಾಡಿತ್ತು. ಮತ್ತೊಂದು ಕಡೆ ಜಲಮೂಲಗಳನ್ನು ಸಂರಕ್ಷಣೆ ಮಾಡಿ, ಮುಂದೆ ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ನೀರಿನ ಕೊರತೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನೂ ಕೂಡಾ ನೀಡಲಾಗಿತ್ತು. ಜಲಧಾರೆಯ ಅಭೂತ ಪೂರ್ವ ಯಶಸ್ಸಿನಿಂದ ಜೆಡಿಎಸ್ ಗೆ ಒಂದು ರೀತಿಯ ಮೈಲೇಜ್ ಸಿಕ್ಕಿದ್ದಂತೂ ಸುಳ್ಳಲ್ಲ.

ಇದರ ಬೆನ್ನಲ್ಲೇ ಬೆಂಗಳೂರನ್ನೇ ಗುರಿಯಾಗಿಟ್ಟುಕೊಂಡು ಜನತಾ ಮಿತ್ರ ಕಾರ್ಯಕ್ರಮ ಕೂಡಾ ಮಾಡಲಾಯಿತು. ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲೂ ಸಂಚರಿಸಿ ಸ್ಥಳೀಯ ಜನರ ಸಮಸ್ಯೆಗಳನ್ನು ಕೇಳಿ ಅಧಿಕಾರಕ್ಕೆ ಬಂದ ತಕ್ಷಣವೇ ಅವೆಲ್ಲವನ್ನೂ ಪರಿಹರಿಸ್ತೀವಿ ಎಂಬ ಭರವಸೆ ನೀಡಿ,ಆ ಮೂಲಕ ಬೆಂಗಳೂರಿನ ಭಾಗದಲ್ಲಿ ಕೂಡಾ ಮತದಾರರನ್ನು ಸೆಳೆಯಲಾಗಿತ್ತು.

ಆಂಧ್ರದಲ್ಲಿ ನವರತ್ನಾಲು ಎಂಬ ಕಾರ್ಯಕ್ರಮ ಮಾಡಿ ಅಧಿಕಾರಕ್ಕೇರಿದ್ದ ಜಗನ್ ಮಾದರಿಯಲ್ಲೇ ಕರ್ನಾಟಕದಲ್ಲಿ ಪಂಚರತ್ನ ಎಂಬ ಕಾರ್ಯಕ್ರಮವನ್ನೂ ಕುಮಾರಸ್ವಾಮಿ ರೂಪಿಸಿದ್ರು.ರೈತ ಕಲ್ಯಾಣ, ಯುವಜನ ಮತ್ತು ಮಹಿಳಾ ಕಲ್ಯಾಣ, ವಸತಿಯ ಆಸರೆ, ಶಿಕ್ಷಣ, ಮತ್ತು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ ನೀಡುವುದಾಗಿ ಕುಮಾರಸ್ವಾಮಿ ಕೊಟ್ಟ ಭರವಸೆಗಳೇ ಪಂಚರತ್ನ ಯಾತ್ರೆಯ ಹೂರಣ. ಇಡೀ ರಾಜ್ಯಾದ್ಯಂತ ಪ್ರವಾಸ ಹೊರಟ ಕುಮಾರಸ್ವಾಮಿಗೆ ಎಲ್ಲ ಭಾಗಗಳಲ್ಲೂ ಅಭೂತಪೂರ್ವ ಸ್ವಾಗತವೇ ಸಿಕ್ಕಿತ್ತು. ಕುಮಾರಸ್ವಾಮಿಯ ಈ ಪಂಚರತ್ನ ಯಾತ್ರೆಯ ಬಗ್ಗೆ ರಾಷ್ಟ್ರೀಯ ಪಕ್ಷಗಳ ಪಡಸಾಲೆಗಳಲ್ಲೂ ಗುಸುಗುಸು ಶುರುವಾಗಿತ್ತು. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಮೊದಲ ಹೆಜ್ಜೆಯನ್ನು ಸಕ್ಸಸ್‌ಪುಲ್ ಆಗಿ ಇಟ್ಟಿದ್ದರು.

ಆಗ ಶುರುವಾಗಿದ್ದೇ ಹಾಸನ ಜಟಾಪಟಿ.

ಇತ್ತ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಯಶಸ್ಸಿನಲ್ಲಿ ತೆಲಾಡ್ತಾ ಇದ್ರೆ, ಅತ್ತ ಹಾಸನದ ಕಾರ್ಯಕ್ರಮವೊಂದರಲ್ಲಿ ಭವಾನಿ ರೇವಣ್ಣ ಮಾತಾಡ್ತಾ ನಾನೇ ಇಲ್ಲಿ ಅಭ್ಯರ್ಥಿ ಎಂಬರ್ಥದಲ್ಲಿ ಘೋಷಣೆ ಮಾಡಿಬಿಟ್ಟರು. ಆ ಕ್ಷಣದಿಂದ ಶುರುವಾಗಿದ್ದೇ ಅಸಲು ತಲೆನೋವು. ಹಾಸನದ ಮಾಜಿ ಶಾಸಕ ದಿವಂಗತ ಎಚ್ ಎಸ್ ಪ್ರಕಾಶ್ ಪುತ್ರ ಸ್ವರೂಪ್ ಗೆ ಟಿಕೆಟ್ ನೀಡೋದಾಗಿ ಭರವಸೆ ಕೊಟ್ಟಿದ್ದ ಕುಮಾರಸ್ವಾಮಿಗೆ ಭವಾನಿ ರೇವಣ್ಣ ಹೇಳಿಕೆ ಒಂದು ರೀತಿ ಉಗುಳಲೂ ಆಗದ, ನುಂಗಲೂ ಆಗದ ಬಿಸಿತುಪ್ಪದಂತಾಯಿತು. ಇತ್ತ ಕುಟುಂಬವನ್ನು ಸಂಭಾಳಿಸಬೇಕು, ಅತ್ತ ಕಾರ್ಯಕರ್ತರನ್ನೂ ನಿಭಾಯಿಸಬೇಕು ಎಂಬಂತಹಾ ವಾತಾವರಣ ಕ್ರಿಯೇಟ್ ಆಗಿತ್ತು.

ಹಾಸನದಿಂದ ಮೊದಲ ಬಾರಿ ಗೆದ್ದು ಶಾಸಕನಾಗಿದ್ದ ಪ್ರೀತಂ ಗೌಡ ನಿರಂತರವಾಗಿ ರೇವಣ್ಣ ಕುಟುಂಬವನ್ನು ಕೆಣಕುತ್ತಾ ಇದ್ದಿದ್ದನ್ನೇ ಸವಾಲಾಗಿ ಸ್ವೀಕರಿಸಿದ್ದ ಭವಾನಿ ಪ್ರಿತಂಗೌಡ ವಿರುದ್ದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದರು. ಅಸಲಿಗೆ ಭವಾನಿ ರೇವಣ್ಣ ರಾಜಕೀಯ ಹೊಸದೇನೂ ಅಲ್ಲ ಹಾಸನ ಜಿಲ್ಲೆಯಲ್ಲಿ ರಾಜಕೀಯವಾಗಿ ತಮ್ಮದೇ ಛಾಪು ಮೂಡಿಸಿದ್ದ ಭವಾನಿ ಕಳೆದ ಬಾರಿಯ ಚುನಾವಣೆಯಲ್ಲೇ ಸ್ಪರ್ಧೆ ಮಾಡಲು ಉತ್ಸುಕರಾಗಿದ್ದರು. ಆದ್ರೆ ಪದೇ ಪದೇ ಕುಟುಂಬ ರಾಜಕಾರಣದ ಹಣೆಪಟ್ಟಿ ಬಿಳುತ್ತಿದ್ದುದ್ದನ್ನು ಗಂಭೀರವಾಗಿ ಪರಿಣಣಿಸಿದ್ದ ಕುಮಾರಸ್ವಾಮಿ ಆಗ ನಮ್ಮ ಕುಟುಂಬದಿಂದ ಇಬ್ಬರು ಮಾತ್ರಾ ಸ್ಪರ್ಧೆ ಮಾಡೋದಾಗಿ ಹೇಳಿಬಿಟ್ಟಿದ್ರು. ಅದೇ ಕಾರಣಕ್ಕೆ ಭವಾನಿಗೆ ಆಗ ಟಿಕೆಟ್ ತಪ್ಪಿ ಹೋಗಿತ್ತು. ಈ ಸಲ ಹೇಗಾದ್ರೂ ವಿಧಾನಸಭೆ ಪ್ರವೇಶ ಮಾಡುವ ಉಮ್ಮೇದಿಯಲ್ಲಿರುವ ಭವಾನಿ ಶತಾಯಗತಾಯ ಹಾಸನದಿಂದಲೇ ಸ್ಪರ್ಧೆ ಮಾಡಬೇಕು ಎಂಬ ಹಠದಲ್ಲಿದ್ದಾರೆ. ಆದ್ರೆ ಭವಾನಿಗೆ ಟಿಕೆಟ್ ಕೊಟ್ಟಿದ್ದೇ ಆದಲ್ಲಿ ಮತ್ತೆ ಕುಟುಂಬ ರಾಜಕಾರಣ ಹಣೆಪಟ್ಟಿ ಬೀಳುತ್ತೆ ಅನ್ನೋ ಭಯ ಕುಮಾರಸ್ವಾಮಿಯದ್ದು. ರೇವಣ್ಣ, ಪ್ರಜ್ವಲ್, ಸೂರಜ್ ಈಗಾಗಲೇ ವಿವಿಧ ಸ್ಥಾನಗಳಲ್ಲಿ ಇದ್ದಾರೆ. ಮತ್ತೆ ಭವಾನಿಗೂ ಟಿಕೆಟ್ ಕೊಟ್ಟರೆ ಮಾದ್ಯಮಗಳೂ, ವಿಪಕ್ಷಗಳೂ ಟೀಕಿಸದೇ ಸುಮ್ಮನೆ ಇರುತ್ತವೆಯೇ ಎಂಬ ಆತಂಕ ಒಂದು ಕಡೆಯಾದ್ರೆ. ಇಂತಹಾ ನಿರ್ಧಾರದಿಂದ ಅಕ್ಕಪಕ್ಕದ ಕನಿಷ್ಟ ಹತ್ತು ಕ್ಷೇತ್ರಗಳ ಮೇಲಾದ್ರೂ ಪರಿಣಾಮ ಆಗಬಹುದು ಎಂಬ ಭಯ ಮತ್ತೊಂದು ಕಡೆ. ತಾವು ಅಧಿಕಾರದಲ್ಲಿ ಇದ್ದಾಗಲೇ ಪುತ್ರ ನಿಖಿಲ್ ರನ್ನು ಮಂಡ್ಯ ಲೋಕಸಭಾ ಕಣಕ್ಕೆ ಇಳಿಸಿ ಮುಖಭಂಗ ಅನುಭವಿಸಿದ್ದು ಇನ್ನೂ ಕಣ್ಣೆದುರಲ್ಲೇ ಇದೆ.

ಆದ್ರೆ ಏನೇ ಆದ್ರೂ ಹಾಸನ ಮೇಲಿರುವ ತಮ್ಮ ಹಿಡಿತ ಬಿಟ್ಟುಕೊಡಬಾರದು ಎಂಬುದು ರೇವಣ್ಣ ಕುಟುಂಬದ ಅಚಲ ನಿರ್ಧಾರ. ಸೂರಜ್ ರೇವಣ್ಣ ಕೂಡಾ ಮಾದ್ಯಮಗಳ ಮುಂದೆ ತಮ್ಮ ಚಿಕ್ಕಪ್ಪ ಕುಮಾರಸ್ವಾಮಿ ಗೆ ವ್ಯತಿರಿಕ್ತ ಅನ್ನೋ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದು ಉರಿಯೋ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಯಿತು. ಯಾವಾಗ ಮಾದ್ಯಮಗಳಲ್ಲಿ ಈ ವಿಚಾರಕ್ಕೆ ಹೈಪ್ ಕ್ರಿಯೇಟ್ ಆಯ್ತೋ ಕಡೆಗೆ ರೇವಣ್ಣ ಮದ್ಯ ಪ್ರವೇಶ ಮಾಡಬೇಕಾಯಿತು. ಇದು ನಮ್ಮ ಕುಟುಂಬದ ವಿಚಾರ. ದೇವೇಗೌಡರ ಮುಂದೆ ಕುಳಿತು, ಚರ್ಚೆ ಮಾಡಿ ಈ ವಿಚಾರವನ್ನು ಬಗೆ ಹರಿಸಿಕೊಳ್ತಿವಿ ಅಂದ್ರು. ಸದ್ಯಕ್ಕೆ ಚುನಾವಣಾ ಪ್ರಚಾರಕ್ಕೂ ಬರದ ಸ್ಥಿತಿಯಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಇಳಿ ವಯಸ್ಸಿನಲ್ಲಿ ಮಕ್ಕಳ ಜೊತೆ ಕುಳಿತು ರಾಜೀ ಪಂಚಾಯ್ತಿಗೆ ಇಳಿಯಬೇಕಾಯಿತು, ಅದಕ್ಕೇ ಕುಮಾರಸ್ವಾಮಿ ಪದೇ ಪದೇ, ನನಗೆ ದೇವೇಗೌಡರ ಆರೋಗ್ಯ ಮುಖ್ಯ ,,,ಪದೇ ಪದೇ ದೇವೇಗೌಡರನ್ನು ಈ ವಿಚಾರಕ್ಕೆ ಎಳೆದು ತರಬೇಡಿ ಅನ್ನುತ್ತಿರುವುದು. ಆದದ್ದಾಗಲಿ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡೇ ಬಿಡೋಣ ಎಂದು ಕಳೆದವಾರ ಒಂದು ಸಭೆಯನ್ನೂ ಕರೆದ ಕುಮಾರಸ್ವಾಮಿ ಹಾಸನದ ಪ್ರಮುಖ ಜೆಡಿಎಸ್ ಲೀಡರ್ ಗಳನ್ನು ಮಾತ್ರಾ ಈ ಸಭೆಗೆ ಆಹ್ವಾನ ಮಾಡಿದ್ರು. ಈ ಸಭೆಯ ಬಳಿಕ ಅಭ್ಯರ್ಥಿ ಘೋಷಣೆ ಮಾಡುವುದು ಕುಮಾರಸ್ವಾಮಿ ಉದ್ದೇಶವಾಗಿತ್ತು. ಆದ್ರೆ ಹಾಸನವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಇಷ್ಟವಿಲ್ಲದ ರೇವಣ್ಣ ಮತ್ತೆ ತಮ್ಮ ತಂದೆ ದೇವೇಗೌಡರ ಮೂಲಕ ಒತ್ತಡ ಹಾಕಿಸಿ ಆ ಸಭೆಯನ್ನೂ ರದ್ದು ಮಾಡಿಸಿದ್ರು.

ಹಾಸನದ ವಿಚಾರದಲ್ಲಿ ರೇವಣ್ಣ ತೀರ್ಮಾನವೇ ಅಂತಿಮ ಎಂದು ಮಾದ್ಯಮ ಸಂವಾದ ವೊಂದರಲ್ಲಿ ಹೇಳಿಕೆ ಕೊಟ್ಟಿದ್ದ ಕುಮಾರಸ್ವಾಮಿ, ಇದೀಗ ಹಾಸನ ವಿಚಾರಕ್ಕೆ ನಾನೇ ಎಂಟ್ರಿ ಆಗುತ್ತೇನೆ ಅಂತಿದ್ದಾರೆ. ಹಿಂದೆ ಆಗಿದ್ದ ಕೆಲವು ತಪ್ಪುಗಳು ಮತ್ತೆ ಆಗದಂತೆ ನೋಡಿಕೊಳ್ತೀನಿ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡ್ತೀನಿ ಎಂದೆಲ್ಲಾ ಮಾತನಾಡುತ್ತಿರುವ ಕುಮಾರಸ್ವಾಮಿ ಮನಸ್ಸಿನಲ್ಲಿ ಸ್ವರೂಪ್ ಗೆ ಟಿಕೆಟ್ ಕೊಡಬೇಕು ಅನ್ನೋದು ಇರೋದಂತೂ ಸ್ಪಷ್ಟ. ಆದ್ರೆ ಹಾಸನ ವಿಚಾರದಲ್ಲಿ ಜಿದ್ದಿಗೆ ಬಿದ್ದಿರುವ ರೇವಣ್ಣ ಪ್ಯಾಮಿಲಿ ಅದಕ್ಕೆ ಅವಕಾಶ ಕೊಡುತ್ತದೆಯೇ, ಒಂದೊಮ್ಮೆ ಕುಮಾರಸ್ವಾಮಿ ಹಠಕ್ಕೆ ಬಿದ್ದು ಸ್ವರೂಪ್ ಗೇ ಟಿಕೆಟ್ ಕೊಟ್ಟರೂ ಸಹಾ ರೇವಣ್ಣ ಕುಟುಂಬದ ಕೃಪಾಕಟಾಕ್ಷ ಇಲ್ಲದೇ ಹಾಸನದಲ್ಲಿ ಸ್ವರೂಪ್ ಗೆಲ್ಲಲು ಸಾದ್ಯವೇ ಎಂಬಂತಹಾ ಪ್ರಶ್ನೆಗಳೂ ಎದುರಾಗುತ್ತವೆ. ಇದೆಲ್ಲದರ ನಡುವೆ ಹಾಸನದ ಅಕ್ಕಪಕ್ಕದ ಕ್ಷೇತ್ರಗಳ ಮೇಲೂ ಕುಮಾರಸ್ವಾಮಿ ನಿರ್ಧಾರ ಫ್ರತಿಫಲಿಸಲಿದೆ..

ರಾಜ್ಯದಾದ್ಯಂತ ದೊಡ್ಡ ಅಲೆ ಕ್ರಿಯೇಟ್ ಮಾಡಿದ್ದ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಹಾಸನ ಗೊಂದಲದ ವಿಚಾರ ಶುರುವಾಗಿದ್ದೇ ದಿಢೀರನೆ ತಳಕಚ್ಚುವಂತಾಯ್ತು. ಆ ಬೇಸರ ಕುಮಾರಸ್ವಾಮಿ ಗೆ ಇದ್ದೇ ಇದೆ. ಆರೋಗ್ಯವನ್ನು ಲೆಕ್ಕಿಸದೇ, ಕಳೆದ ಮೂರು ತಿಂಗಳಿನಿಂದ ಮನೆಯಿಂದ ದೂರವಿದ್ದು ಹಗಲೂ ರಾತ್ರಿ ಜನಗಳ ಮದ್ಯೆ ಇದ್ದ ಕುಮಾರಸ್ವಾಮಿ ಗೆ ಹಾಸನ ಟಿಕೆಟ್ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿ ಮಾಡಿದಂತಾಗಿದೆ ಅನ್ನೋದಂತೂ ಸತ್ಯ.. ಪದೇ ಪದೇ ರೇವಣ್ಣ ಪ್ಯಾಮಿಲಿಯನ್ನು ಕೆಣಕಿದ್ದ ಪ್ರೀತಂಗೌಡ ಮೂಲಕ ಬಿಜೆಪಿ ನಾಯಕರು ಒಂದು ಮೈಂಡ್ ಗೇಮ್ ನಲ್ಲಿ ಮೊದಲ ಹಂತದ ಜಯವನ್ನಂತೂ ದಾಖಲಿಸಿ ಆಗಿದೆ. ಮುಂದೇನಾಗುತ್ತೋ ನೋಡಬೇಕು..

Leave a Reply

Your email address will not be published. Required fields are marked *

error: Content is protected !!