ಪ್ರತ್ಯೇಕ ಹಾಸ್ಟೆಲ್‌ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ತೃತೀಯ ಲಿಂಗಿಗಳು
ಬೆ0ಗಳೂರು: ಪ್ರತ್ಯೇಕ ಹಾಸ್ಟೇಲ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ತೃತೀಯ ಲಿಂಗಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಉನ್ನತ ಶಿಕ್ಷಣ ಮಾಡುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ನಿಯಮದಂತೆ ಯಾವುದೇ ಹಾಸ್ಟೆಲ್ ವ್ಯವಸ್ಥೆ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಮಂಗಳಮುಖಿಯರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ಕೋರಿ ರಾಜ್ಯದ ಪ್ರಥಮ ತೃತೀಯ ಲಿಂಗಿ ವೈದ್ಯೆ ಡಾ. ತ್ರಿನೇತ್ರಾ ಹಲ್ದಾರ್ ಗುಮ್ಮರಾಜು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ವಾದ ಆಲಿಸಿದ ಬಳಿಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಹಾಗೂ ಯುಜಿಸಿಗೆ ನೋಟಿಸ್ ಜಾರಿಗೊಳಿಸಿತು. ರಾಷ್ಟಿಯ ವೈದ್ಯಕೀಯ ಆಯೋಗಕ್ಕೂ ತುರ್ತು ನೋಟಿಸ್ ಜಾರಿಗೊಳಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು ಗೊತ್ತಾ?: ಅರ್ಜಿದಾರರ ಪರ ವಕೀಲರು, ಸಾಮಾನ್ಯ ಹಾಸ್ಟೆಲ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಾಕಷ್ಟು ಕಿರುಕುಳ ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸಾಕಷ್ಟು ಮಂದಿ ಉನ್ನತ ಶಿಕ್ಷಣ ಪೂರೈಸದೆ ಅರ್ಧಕ್ಕೇ ವಿದ್ಯಾಭ್ಯಾಸ ಕೈಬಿಡುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು. 2020ರ ಸೆ.25ರಂದು ತೃತೀಯ ಲಿಂಗಿಗಳ (ಹಕ್ಕುಗಳ ಸಂರಕ್ಷಣೆ) ಅಧಿನಿಯಮ-2020ಜಾರಿಗೆ ಬಂದಿದೆ. ಅದರ ನಿಯಮ 10ರ ಪ್ರಕಾರ ತೃತೀಯ ಲಿಂಗಿಗಳಿಗೆ ತಾತ್ಕಾಲಿಕ ಶೆಲ್ಟರ್‌ಗಳಷ್ಟೇ ಅಲ್ಲದೆ ಸ್ಟೇ ಹೋಂ ಹಾಗೂ ತಂಗುವಿಕೆಗೆ ಪ್ರತ್ಯೇಕ ವ್ಯವಸ್ಥೆ, ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳು ಹಾಗೂ ಶೌಚಗೃಹಗಳು ಸೇರಿ ಸಾಂಸ್ಥಿಕ ಮೂಲಸೌಕರ್ಯಗಳನ್ನು ಸರ್ಕಾರಗಳು ಕಲ್ಪಿಸಿಕೊಡಬೇಕಿದೆ ಎಂದು ಹೇಳಿದ್ದಾರೆ.
ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವುದಾಗಿ ಪಂಜಾಬ್ ವಿಶ್ವವಿದ್ಯಾಲಯ ಘೋಷಣೆ ಮಾಡಿದೆ. ಜತೆಗೆ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (ಟಿಐಎಸ್‌ಎಸ್) ಸಹ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ವ್ಯವಸ್ಥೆ ಒದಗಿಸುವುದಾಗಿ ತಿಳಿಸಿದೆ. ಅದೇ ರೀತಿ ರಾಜ್ಯದಲ್ಲೂ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ. ಆದರೆ, ಈವರೆಗೂ ರಾಜ್ಯದಲ್ಲಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಗಾಗಿ ಯಾವುದೇ ನಿರ್ದಿಷ್ಟ ನಿಯಮ ರೂಪಿಸಲಾಗಿಲ್ಲ. 2020ರ ಅಧಿನಿಯಮದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಶಿಕ್ಷಣವನ್ನೂ ಸೇರಿಸಲಾಗಿದೆ. ಹೀಗಿದ್ದರೂ, ಉನ್ನತ ಶಿಕ್ಷಣ ಮಾಡುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಒದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಅವರೇ ಆಯ್ದುಕೊಂಡ ಲಿಂಗದ ಆಧಾರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ನಿರಾಕರಿಸುವುದು ಸಂವಿಧಾನದ ಪರಿಚ್ಛೇದ 14,15, ಮತ್ತು 21ರ ಉಲ್ಲಂಘನೆಯಾಗಲಿದೆ. ಆದ್ದರಿಂದ, ಹಾಸ್ಟೆಲ್‌ಗಳ ಪ್ರವೇಶ ಅರ್ಜಿಯಲ್ಲಿ ಪುರುಷ/ಸ್ತ್ರೀ ಲಿಂಗಗಳ ಜತೆಗೆ ತೃತೀಯ ಲಿಂಗಿಗಳಿಗೂ ಆಯ್ಕೆ ಕಲ್ಪಿಸಲು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಸುತ್ತೋಲೆ ಅಥವಾ ಆದೇಶ ಹೊರಡಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.