ನಾನು ಬುದ್ದಿವಂತ ವಿದ್ಯಾರ್ಥಿ ಅಲ್ಲ.! ಓದಿನಲ್ಲಿ ತುಂಬಾ ಹಿಂದೆ ಇದ್ದೆ: ಆದರೆ ಇತರೆ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದೆ – ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ರಾಜಕಾರಣಕ್ಕೆ ನನಗೆ ತರಬೇತಿ ನೀಡಿದ್ದೇ ಎ.ಟಿ.ಎನ್.ಸಿ. ಕಾಲೇಜ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾ ವಿದ್ಯಾಲಯದ ಹಳೇ ವಿದ್ಯಾರ್ಥಿ ಬಳಗ ಮತ್ತು ವಾಣಿಜ್ಯ ವೃಂದ ಶಿವಮೊಗ್ಗ ಇದರ ಪ್ರಥಮ ವಾರ್ಷಿಕ ಮಹಾಸಭೆ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ರಾಜಕೀಯ ಧುರೀಣರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ಓದಿನಲ್ಲಿ ಬಹಳ ಹಿಂದೆ ಇದ್ದೆ, ಬುದ್ದಿವಂತ ವಿದ್ಯಾರ್ಥಿ ಅಲ್ಲ. ಆದರೆ, ಇತರೆ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದೆ, ಕಾಲೇಜು ವಿದ್ಯಾರ್ಥಿಗಳ ಸಂಘದ ನಾಯಕನಾಗಿ ಅತಿಹೆಚ್ಚು ಲೀಡ್ ನಲ್ಲಿ ಆಯ್ಕೆಯಾಗಿದ್ದೆ. ನನ್ನ ವಿರೋಧಿಗಳು ಅನೇಕ ರೀತಿಯ ತಂತ್ರ ಹೂಡಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನನ್ನ ಸ್ನೇಹಿತರು ನನ್ನನ್ನು ನಾಯಕನಾಗಿ ಮಾಡಿದರು. ವಿದ್ಯಾರ್ಥಿ ಜೀವನದಲ್ಲಿ ಕೊನೆಯ ದಿನ 1975 ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜೈಲು ಪಾಲಾದೆ. ಆಗ ನನಗೆ ಜೈಲಿನ ಸಮಸ್ಯೆಗಳ ಅರಿವಾಯಿತು. ಇತ್ತೀಚೆಗೆ ಸದನದಲ್ಲಿ ಜೈಲುಗಳ ಸುಧಾರಣೆಗೆ ಬಿಲ್ ಮಂಡನೆ ಮಾಡಿದಾಗ ನನ್ನ ಜೈಲಿನ ಕಥಾನಕ ವಿವರಿಸಿ ಆ ಬಿಲ್ ಅವಿರೋಧವಾಗಿ ಆಯ್ಕೆಯಾಗುವಲ್ಲಿ ಪ್ರಮುಖ ಕಾರಣವಾಯಿತು. ಒಟ್ಟು 5 ಬಾರಿ ಸೋತು 4 ಬಾರಿ ತೀರ್ಥಹಳ್ಳಿ ಕ್ಷೇತ್ರದಿಂದ ಗೆದ್ದಿದ್ದೇನೆ. ಸೋತಾಗ ಅನೇಕ ಹಿತೈಷಿಗಳು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುವಂತೆ ಸಲಹೆ ನೀಡಿದರು. ಆಗ ನಾನು ನಮಗೆ ಆರ್.ಎಸ್.ಎಸ್. ಉತ್ತಮ ಸಂಸ್ಕಾರ ನೀಡಿದೆ. ಮಂತ್ರಿ ಅಥವಾ ಶಾಸಕನಾಗಲು ರಾಜಕಾರಣಕ್ಕೆ ನಾನು ಸೇರಿದ್ದಲ್ಲ. ಯಾವುದೇ ಮಂತ್ರಿ ಸ್ಥಾನ ನೀಡದಿದ್ದರೂ ಕೊನೆಯುಸಿರುವವರೆ ನಾನು ಪಕ್ಷ ಬಿಡುವುದಿಲ್ಲ ಎಂದಿದ್ದೆ. ನಾನು ಕಾದಿದ್ದಕ್ಕೆ ಪಕ್ಷದ ಹಿರಿಯರು ಉನ್ನತ ಸ್ಥಾನ ಮಾನ ನೀಡಿದ್ದಾರೆ ಎಂದು ಹೇಳಿದರು.

ನನ್ನ ಜೀವನದ ಒಂದು ಚಾಲೆಂಜ್ ಆಗಿ ಈ ಹುದ್ದೆಯನ್ನು ಸ್ವೀಕರಿಸಿದ್ದೇನೆ. ಹೊಡೆದ ಕೈಗಳೇ ಇಂದು ನನಗೆ ಸೆಲ್ಯೂಟ್ ಮಾಡುತ್ತಿವೆ. ಇದು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಭಾವಿಸುತ್ತೇನೆ ಎಂದು‌‌ ಅಭಿಪ್ರಾಯ ಪಟ್ಟರು. ಈ ಕಾಲೇಜ್ ನಮ್ಮದು, ನಮ್ಮನ್ನು ಬಳಸಿಕೊಳ್ಳಿ, ನಮ್ಮ ಇತಿಮಿತಿಯೊಳಗೆ ಸಹಕಾರ ಕೊಡಲು ಸಿದ್ಧ ಎಂದರು.
ಇದು ಸನ್ಮಾನ ಅಲ್ಲ, ನನಗೆ ನೀಡಿದ ಆಶೀರ್ವಾದ ಎಂದು ಭಾವಿಸುತ್ತೇನೆ. ನನ್ನ ಜೀವನಕ್ಕೆ ತಿರುವು ನೀಡಿದ ಶಿಕ್ಷಣ ಸಂಸ್ಥೆ ಇದು, ಎಂದೂ ಮರೆಯಲು ಸಾಧ್ಯವಿಲ್ಲ ಎಂದರು. ತಿದ್ದಿ ತೀಡಿದ ಉಪನ್ಯಾಸಕರನ್ನು ಜ್ಞಾಪಿಸಿಕೊಂಡರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ
ಕುವೆಂಪು ವಿವಿ ಸೆನೆಟ್ ಸದಸ್ಯರಾಗಿ ವಿದ್ಯಾರ್ಥಿ ಪ್ರತಿನಿಧಿಗಳು ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ಮೊದಲ ಬಾರಿಗೆ ಕುವೆಂಪು ವಿವಿಗೆ ಹೋರಾಟದ ಫಲವಾಗಿ ಸೆನೆಟ್ ಸದಸ್ಯನಾಗಿ ಆಯ್ಕೆಯಾದೆ. ಎ.ಟಿ.ಎನ್.ಸಿ.ಸಿ. ಮತ್ತು ಎಬಿವಿಪಿ ನಮ್ಮನ್ನು ಬೆಳೆಸಿದವು. ಎಲ್ಲರ ಆಶೀರ್ವಾದದಿಂದ ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಶಿವಮೊಗ್ಗದಲ್ಲಿ ಭವಿಷ್ಯವಿಲ್ಲ ಎನ್ನುವ ಕಾಲವೊಂದಿತ್ತು. ಆದರೆ, ಅದು ಸುಳ್ಳಾಗಿದೆ. ಎಲ್ಲರ ಪ್ರಯತ್ನದ ಫಲವಾಗಿ ರೈಲ್ವೇ ಮತ್ತು ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಕೇಂದ್ರದ ಉಡಾನ್ ಯೋಜನೆಯಲ್ಲಿ 5 ಮಾರ್ಗಗಳು ಮಂಜೂರಾಗಿವೆ. ಶಿವಮೊಗ್ಗ –ಶಿಕಾರಿಪುರ –ರಾಣೆಬೆನ್ನೂರು ಹೊಸ ರೈಲು ಮಾರ್ಗದ ಟೆಂಡರ್ ಪ್ರಕ್ರಿಯೆ ನಡೆದಿದೆ‌ ಎಂದು‌ ಹೇಳಿದರು.


ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸರಸ್ವತಿ ಮಂದಿರವಾಗಿದ್ದು, ಇದರ ಅಭಿವೃದ್ಧಿಗೆ ಹೆಚ್ಚಿನ ಸಹಾಯ ನೀಡಲು ಜನಪ್ರತಿನಿಧಿಗಳಾಗಿ ನಾವು ಬದ್ಧರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎನ್.ಇ.ಎಸ್. ಸಂಸ್ಥೆಯ ಉಪಾಧ್ಯಕ್ಷ ಅಶ್ವತ್ಥನಾರಾಯಣಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಾಗೀಶ್, ಪ್ರಾಂಶುಪಾಲ ಡಾ. ಸುರೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!