ನಾನು ಮತ್ತು ನನ್ನ ಕಾರ್ಯಕರ್ತರು ಮಾರಾಟಕ್ಕಿಲ್ಲ : ಬಾಳೇಕಾಯಿ ಶ್ರೀನಿವಾಸ್

ನಾನು ಮತ್ತು ನನ್ನ ಕಾರ್ಯಕರ್ತರು ಮಾರಾಟಕ್ಕಿಲ್ಲ : ಬಾಳೇಕಾಯಿ ಶ್ರೀನಿವಾಸ್

ಚಿತ್ರದುರ್ಗ: ಎಸ್.ಡಿ.ಪಿ.ಐ. ಅಭ್ಯರ್ಥಿ ಚುನಾವಣಾ ಕಣದಲ್ಲಿ ಉಳಿಯುವುದಿಲ್ಲ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ನಾನು ಮತ್ತು ಕಾರ್ಯಕರ್ತರು ಯಾರೂ ಸಹ ಮಾರಾಟಕ್ಕಿಲ್ಲ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಾಳೆಕಾಯಿ ಶ್ರೀನಿವಾಸ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಹಾಗೂ ಅವರ ಪತಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಇವರುಗಳು ಎಷ್ಟಕ್ಕೆ ಸೇಲಾಗಿದ್ದಾರೋ ಗೊತ್ತಿಲ್ಲ. ಆದರೆ ಕಾರ್ಯಕರ್ತರು ಅಭಿಮಾನಿಗಳನ್ನು ಬೀದಿಗೆ ಬಿಟ್ಟು ಹೋಗಿದ್ದಾರೆ. ಸೌಭಾಗ್ಯ ಬಸವರಾಜನ್ ದಂಪತಿಗಳಂತೆ ಬೆಂಬಲಿಗರಿಗೆ ಮೋಸ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ನಾನು ಅಂತಹ ರಾಜಕಾರಣ ಮಾಡುವವನಲ್ಲ ಎಂದರು.
ಅವೈಜ್ಞಾನಿಕ ಡಿವೈಡರ್, ಕಾಮಗಾರಿಗಳಲ್ಲಿ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯುವುದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿಯ ಸಾಧನೆ. ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಕ್ಷೇತ್ರದಲ್ಲಿ ಅನ್ಯಾಯವಾಗುತ್ತಿದೆ. 26 ಸ್ಲಂಗಳ ಪೈಕಿ ಅರ್ಧ ಸ್ಲಂಗಳಲ್ಲಿ ಮಾತ್ರ ಹಕ್ಕುಪತ್ರಗಳನ್ನು ಕೊಡಲಾಗಿದೆ. ಇನ್ನರ್ಧ ಕೊಟ್ಟಿಲ್ಲ. ಒಂದು ಹಕ್ಕುಪತ್ರ ಕೊಡಲು ಶಾಸಕರ ಹಿಂಬಾಲಕರು ಹದಿನೈದು ಸಾವಿರ ರೂ.ಗಳ ಲಂಚ ಕೇಳುತ್ತಿದ್ದಾರೆಂದು ಬಾಳೆಕಾಯಿ ಶ್ರೀನಿವಾಸ್ ಆಪಾದಿಸಿದರು.

ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಗಂಗಾ ಕಲ್ಯಾಣದಲ್ಲೂ ಕಮೀಷನ್, ನಿರುದ್ಯೋಗ ತಾಂಡವವಾಡುತ್ತಿದೆ. ಹಣದ ವ್ಯಾಮೋಹ ತೋರಿಸಿ ಚುನಾವಣೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿರವರು ಚಿತ್ರದುರ್ಗಕ್ಕೆ ಬಂದಾಗ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಹಣ ಕೊಟ್ಟು ಜನರನ್ನು ಕರೆಸಿದ್ದಾರೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕೂಡ ಯಾವಾಗ ಬೇಕಾದರೂ ಬಿಜೆಪಿಗೆ ಕರೆಸಿಕೊಳ್ಳಬಹುದು.

ಚಿತ್ರದುರ್ಗಕ್ಕೆ ರಘು ಆಚಾರ್ ಕೊಡುಗೆ ಏನು ಎಂದು ಬಾಳೆಕಾಯಿ ಶ್ರೀನಿವಾಸ್ ಪ್ರಶ್ನಿಸಿದರು.

ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಶೋಷಿತರು, ಹಿಂದುಳಿದವರು ಪ್ರಾಮಾಣಿಕರನ್ನು ಕಾಯುತ್ತಿದ್ದಾರೆ. ಕ್ಷೇತ್ರದಲ್ಲಿ ಎಲ್ಲಿ ಹೋದರೂ ಮತದಾರರಲ್ಲಿ ಒಳ್ಳೆಯ ಒಲವಿರುವುದನ್ನು ನೋಡಿದರೆ ಗೆಲುವು ನನ್ನದೆ. ಹೊರಗಿನಿಂದ ಬಂದು ಚುನಾವಣೆಗೆ ನಿಂತವರನ್ನು ಸೋಲಿಸಿ ಸ್ಥಳೀಯರಿಗೆ ಆದ್ಯತೆ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕುಂಚಿಗನಾಳ್ ಮಹಲಿಂಗಪ್ಪ, ರಾಜಣ್ಣ, ಸೈಯದ್ ಸಾದತ್, ಜಾಕೀರ್ ಹುಸೇನ್, ಶಬ್ಬೀರ್ ಹಾಜರಿದ್ದರು.

 

Leave a Reply

Your email address will not be published. Required fields are marked *

error: Content is protected !!