ಬಸವರಾಜ್‌ಗೆ ಟಿಕೇಟ್ ಕೊಟ್ಟರೆ ಬಿಜೆಪಿ ಗೆಲುವು ತ್ರಾಸದಾಯಕ; ಹೆಚ್. ಮಲ್ಲೇಶ್
ದಾವಣಗೆರೆ: ಮಾಜಿ ಶಾಸಕ ಎಂ. ಬಸವರಾಜ ನಾಯ್ಕ್ ಅಂತವರಿಗೆ ಟಿಕೇಟ್ ಕೊಟ್ಟರೆ ಮಾಯಕೊಂಡ ಕ್ಷೇತ್ರ ಬಿಜೆಪಿಯಿಂದ ಕೈತಪ್ಪಿ ಹೋಗುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ಪಕ್ಷದ ಮುಖಂಡರು ಟಿಕೆಟ್ ನೀಡುವಾಗ ಒಳ್ಳೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಡಿಎಸ್‌ಎಸ್ (ಡಾ. ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಹೆಚ್. ಮಲ್ಲೇಶ್ ಅಭಿಪ್ರಾಯಿಸಿದ್ದಾರೆ.
ಬಸವರಾಜ್ ನಾಯ್ಕ್ ಅವರು ಅಧಿಕಾರದ ಆಸೆಗೆ ಪಕ್ಷ ಬಿಟ್ಟು ಹೋಗಿದ್ದರು. ಈಗ ಮತ್ತೆ ಅಧಿಕಾರ ಸಿಗುತ್ತದೆ ಎಂದು ಅಲೆದಾಡುತ್ತಿರುವವರಿಗೆ ಬಿಜೆಪಿಯಲ್ಲಿ ಮನ್ನಣೆ ನೀಡುವ ಅವಶ್ಯಕತೆ ಇಲ್ಲ ಎಂಬ ಮಾತುಗಳು ಮಾಯಕೊಂಡ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಪಕ್ಷ ಟಿಕೆಟ್ ನೀಡಿ ಗೆಲ್ಲಿಸಿ ಶಾಸಕರಾದ ಸಂದರ್ಭದಲ್ಲಿ ಯವುದೇ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯನ್ನ ಸಂಘಟನೆ ಮಾಡಲು ಸಹ ಅವರಿಂದ ಆಗಲಿಲ್ಲ. ಈಗ ಇವರಿಗೆ ಮಣೆ ಹಾಕಿದರೆ ಬಿಜೆಪಿಗೆ ಗೆಲುವು ತ್ರಾಸದಾಯಕ ಆಗಲಿದೆ ಎಂದು ಸ್ವತಃ ಅವರ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ ಎಂದಿದ್ದಾರೆ.
ಕಳೆದ ಚುನಾವಣೆಯಲ್ಲಿ ಪಕ್ಷ ಟಿಕೇಟ್ ನೀಡದ ಕಾರಣ ಜೆಡಿಯುಗೆ ಹೋಗಿದ್ದ ಬಸವರಾಜ್ ನಾಯ್ಕ್ ಅಲ್ಲಿ ಯಶಸ್ಸು ಕಾಣದ ಹಿನ್ನೆಲೆ ಮತ್ತೆ ಬಿಜೆಪಿಗೆ ಬಂದರು. ಈಗ ಮಾಯಕೊಂಡ ಕ್ಷೇತ್ರದ ಟಿಕೇಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ. ಕೇವಲ ಟಿಕೆಟ್ ಹಾಗೂ ಅಧಿಕಾರಕ್ಕೆ ಇತ್ತೀಚೆಗೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಪಕ್ಷದಿಂದ ಟಿಕೆಟ್ ಪಡೆದು ಶಾಸಕನಾಗುವ ಭ್ರಮೆಯಲ್ಲಿದ್ದಾರೆ. ಈಗಾಗಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಗೆಲುವು ಅಷ್ಟು ಸುಲಭವಿಲ್ಲ. ಬಿಜೆಪಿ ಗೆಲ್ಲಬೇಕೆಂದರೆ ಈ ಬಾರಿ ಬಸವರಾಜ್ ನಾಯ್ಕ ಅಂಥವರನ್ನ ದೂರವಿಡಬೇಕೆಂಬುದು ಅವರ ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ ಎಂದಿದ್ದಾರೆ.