ಕಾಡಾ ಅಧ್ಯಕ್ಷರಿಂದ ಚನ್ನಗಿರಿ ತಾಲ್ಲೂಕಿನ ಭದ್ರಾ ಅಚ್ಚುಕಟ್ಟು ವ್ಯಾಪ್ತಿ ಪ್ರದೇಶಕ್ಕೆ ಬೇಟಿ
ದಾವಣಗೆರೆ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಮತ್ತು ಅರಳಿಪುರ ಗ್ರಾಮಗಳಿಗೆ ನೀರಾವರಿ ಹಾಗೂ ಕಾಡಾ ಅಧಿಕಾರಿಗಳೊಂದಿಗೆ ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಪ್ರವಾಸ ಕೈಗೊಂಡಿದ್ದರು.
ಪ್ರವಾಸದ ಸಮಯದಲ್ಲಿ ಅರಳಿಪುರ ಹಾಗೂ ಕೋಟೆಹಾಳ್ ನೀರು ಬಳಕೆದಾರರ ಸಹಕಾರ ಸಂಘದವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ನಾಲೆಗಳಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಎತ್ತಿಸುವ ಕೆಲಸ ಕೈಗೊಂಡು ನಾಲೆಗಳನ್ನು ಸ್ವಚ್ಛಗೊಳಿಸಿದ ಕಾಮಗಾರಿಯನ್ನು ಪರಿಶೀಲಿಸಲಾಯಿತು ಹಾಗೂ ಸಮಗ್ರ ಕೆರೆ ಅಭಿವೃದ್ದಿ ಯೋಜನೆ ಬಳಸಿಕೊಂಡು ನಡೆಯುತ್ತಿರುವ ಕೆರೆ ರಿವಿಟ್ಮೆಂಟ್ ಕಾಮಗಾರಿ ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಉಪಯೋಗಿಸಿಕೊಂಡು ಚಾನೆಲ್ ಏರಿ ರಸ್ತೆ ಅಭಿವೃದ್ದಿ ಪಡಿಸಿರುವುದನ್ನು ವೀಕ್ಷಿಸಲಾಯಿತು.
ನಂತರ ಮಾತನಾಡುತ್ತಾ ಈ ಬಾರಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಬಹುತೇಕ ಸದಸ್ಯರು ಯುವಕರಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿ ಗ್ರಾಮದ ಪ್ರತಿಯೊಬ್ಬರಿಗೂ ಯೋಜನೆಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಜೊತೆಗೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫಲಾನುಭವಿಗಳಿಗೆ ಯೋಜನೆ ತಲುಪಿಸುವಂತೆ ಹೇಳಿದರು.
ಅದರಂತೆ ಗ್ರಾಮಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಹಾಗೂ ರೈತರ ಹೊಲಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬಹು ಮುಖ್ಯವಾದ ಯೋಜನೆಯಾದ ನರೇಗಾವನ್ನು ಸಮಗ್ರವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.
ಗ್ರಾಮಸ್ಥರು ಮಾತನಾಡಿ ನರೇಗಾ ಬಳಸಿಕೊಂಡು ನಾಲಾ ಸ್ವಚ್ಛಗೊಳಿಸುವ ಕಾರ್ಯ ಮಾಡುವ ಆಲೋಚನೆ ಯಾರು ಕೂಡ ಮಾಡಿರಲಿಲ್ಲ, ಆದರೆ ನೀವು ಅಧ್ಯಕ್ಷರಾದ ನಂತರ ನರೇಗಾ ಬಳಸಿಕೊಂಡು ನಾಲಾ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಈ ಯೋಜನೆಗೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬಲ ಬಂದಿರುವುದು ಸುಳ್ಳಲ್ಲ ನೀವು ಈ ಯೋಜನೆಗೆ ರಾಯಭಾರಿ ಎಂದರೆ ತಪ್ಪಿಲ್ಲ ಎಂದರು.
ನೀವು ಈ ಬಾರಿ ಯಾವುದೇ ಗದ್ದಲ ಇಲ್ಲದೆ ನೀರು ಸರಾಗವಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀಡಿದ್ದೀರಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡುವಂತೆ ಒತ್ತಾಯಿಸುವ ಮೂಲಕ ಭದ್ರಾ ಅಚ್ಚುಕಟ್ಟು ಭಾಗವನ್ನು ಅಭಿವೃದ್ದಿ ಪಡಿಸುವಂತೆ ಕೋರಿದರು.
ಈ ಹಿಂದೆ ನೀರು ಬಳಕೆದಾರರ ಸಂಘಗಳ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅವಕಾಶವಿತ್ತು, ಆಗ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿದ್ದೇವು, ಆದರೆ ಈಗ ಈ – ಟೆಂಡರ್ ಮೂಲಕ ಅವಕಾಶ ನೀಡಿರುವ ಪರಿಣಾಮ ಗುತ್ತಿಗೆದಾರರು ಕಡಿಮೆ ಬೆಲೆಗೆ ಕೋಟ್ ಮಾಡಿ ಗುಣಮಟ್ಟದ ಕಾಮಗಾರಿ ಮಾಡುವ ವಿಶ್ವಾಸ ಇಲ್ಲದಂತಾಗಿದೆ ಹಾಗಾಗಿ ಇದನ್ನು ಬದಲಿಸಿ ಸಂಘಗಳನ್ನು ಗಟ್ಟಿ ಗೊಳಿಸುವಂತೆ ಇಲ್ಲವೇ ಪರ್ಯಾಯ ಆದಾಯ ಮೂಲವನ್ನು ಮಾಡಿಕೊಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧನಂಜಯ್, ನೀರು ಬಳಕೆದಾರರ ಸಂಘದ ಸತೀಶ್, ರವಿ, ನಾಗರಾಜ್ ಹಾಗೂ ನರೇಗಾ ಅಧಿಕಾರಿ ರವಿ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾ, ಸದಸ್ಯರಾದ ಧರ್ಮೇಗೌಡ, ಶಿವಮೂರ್ತಿ, ಪಿಡಿಒ ಆನಂದ್, ಉಪಸ್ಥಿತರಿದ್ದರು.