ಅಕ್ಕಸಾಲಿಗರಿಗೆ ಲಸಿಕೆ: ದೇಶದ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆ – ಜಿಎಂ ಸಿದ್ದೇಶ್ವರ

ದಾವಣಗೆರೆ: ಸ್ವಾತಂತ್ರ್ಯ ನಂತರ ಹಿಂದೆಂದೂ ಕಂಡರಿಯದಂತಹ ಮಹತ್ತರವಾದ ಸುಧಾರಣೆಗಳನ್ನು ನಮ್ಮ ದೇಶದ ಆರೋಗ್ಯ ಕ್ಷೇತ್ರ ಕಂಡಿದ್ದು, ಕೊರೋನಾ ಕೇವಲ ನಕರಾತ್ಮಕ ಪರಿಣಾಮಗಳನ್ನಷ್ಟೇ ನಮ್ಮ ಮೇಲೆ ಬೀರಿಲ್ಲ ಬದಲಾಗಿ ಸಕರಾತ್ಮಕ ಪರಿಣಾಮಗಳನ್ನೂ ಕೂಡ ಉಂಟುಮಾಡಿದೆ ಎಂದು ಸಂಸದ ಡಾ. ಜಿ.ಎಂ.ಸಿದ್ಧೇಶ್ವರ ಹೇಳಿದರು.
ದೈವಜ್ಞ ಕಲ್ಯಾಣ ಮಂಟದಲ್ಲಿ ದೈವಜ್ಞ ಯುವಘಟಕದ ವತಿಯಿಂದ ಅಕ್ಕಸಾಲಿಗ ಕುಶಲಕರ್ಮಿಗಳಿಗೋಸ್ಕರ ಹಮ್ಮಿಕೊಂಡಿದ್ದ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೋನಾ ಪರಿಣಾಮ ಆರೋಗ್ಯ ಕ್ಷೇತ್ರದಲ್ಲಿ ನಾವು ಸಾಕಷ್ಟು ಸ್ವಾವಲಂಭಿಯಾಗಿದ್ದೇವೆ. ಮೂಲಭೂತಸೌಕರ್ಯಗಳನ್ನು ಹೊಂದುವ ಮೂಲಕ ಆರೋಗ್ಯ ಕ್ಷೇತ್ರ ಸಾಕಷ್ಟು ಸದೃಢವಾಗಿದೆ. ಎನ್ 95 ಮಾಸ್ಕ್ ನಮ್ಮ ದೇಶದಲ್ಲಿ ತಯಾರಾಗುತ್ತಿರಲಿಲ್ಲ. ಈಗ ಪ್ರತಿದಿನ ಕೋಟ್ಯಾಂತರ ಮಾಸ್ಕ್ ಗಳನ್ನು ತಯಾರಿಸುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ ಎಂದರೆ ಅದು ಆತ್ಮ ನಿರ್ಭರ ಭಾರತ ಎನ್ನುವ ಮಂತ್ರದಿಂದ ಎಂದು ಸಮರ್ಥಿಸಿಕೊಂಡರು.
ಕೊರೋನಾ ಅತ್ಯಂತ ಏರುಮಟ್ಟದಲ್ಲಿದ್ದ ಸಂದರ್ಭದಲ್ಲಿ ದೇಶದಲ್ಲಿ ಆಕ್ಸಿಜನ್ ಬಳಕೆಯ ಪ್ರಮಾಣ 10 ಪಟ್ಟು ಹೆಚ್ಚಾಗಿತ್ತು, ಈ ಬೇಡಿಕೆಯನ್ನು ನೆಲ, ಜಲ ಮತ್ತು ವಾಯುಮಾರ್ಗಗಳನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು ನಮ್ಮ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಂದರು.
ಪಿ.ಎಂ.ಕೇರ್ಸ್ ನಿಧಿಯಲ್ಲಿ ದೇಶಾದ್ಯಂತ 50 ಸಾವಿರಕ್ಕೂ ಹೆಚ್ಚು ವೆಂಟಿಲೇಟರ್‍ಗಳನ್ನು ಒದಗಿಸಲಾಗಿದೆ. 1.5 ಲಕ್ಷದಷ್ಟು ಆಕ್ಸಿಜನ್ ಸಿಲಿಂಡರ್‍ಗಳನ್ನು ಹಾಗೂ ಲಕ್ಷಾಂತರ ಆಕ್ಸಿಜನ್ ಕಾನ್ಸೆಂಟ್ರೇಟರ್‍ಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದೆ. ಕೋವಿಡ್‍ನಿಂದ ಅನಾಥರಾದ ಮಕ್ಕಳಿಗೆ ಪ್ರತಿ ತಿಂಗಳು ಸ್ಟೈಪೆಂಡ್ ಹಾಗೂ ವಿಮೆಯನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ತಿಳಿಸಿದರು.
ದೇಶಾದ್ಯಂತ 2084 ಕೊರೋನಾ ಆಸ್ಪತ್ರೆಗಳು, 4000 ಕ್ಕೂ ಹೆಚ್ಚು ಕೊರೋನಾ ಹೆಲ್ತ್ ಕೇರ್ ಸೆಂಟರ್‍ಗಳನ್ನು, 1 ಲಕ್ಷಕ್ಕೂ ಹೆಚ್ಚು ಐ.ಸಿ.ಯು ಬೆಡ್‍ಗಳನ್ನು, 16 ಲಕ್ಷಕ್ಕೂ ಹೆಚ್ಚು ಐಸೋಲೇಷನ್ ಬೆಡ್‍ಗಳನ್ನು ಕೊರೋನಾ ಸಂದರ್ಭದಲ್ಲಿ ಪ್ರಾರಂಭಿಸಲಾಗಿದೆ. ಪ್ರತಿ ದಿನ 20 ಲಕ್ಷಕ್ಕೂ ಹೆಚ್ಚು ಕೊರೋನಾ ಟೆಸ್ಟ್‌ಗಳನ್ನು ನಡೆಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿಯೂ ಕೂಡ ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಇಂದು ಆಕ್ಸಿಜನ್ ಜನರೇಟರ್‍ಗಳನ್ನು ಹೊಂದಿವೆ, ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಏಳೆಂಟು ವೆಂಟಿಲೇಟರ್‍ಗಳು ಆಕ್ಸಿಜನ್ ಬೆಡ್‍ಗಳು ಲಭ್ಯವಾಗಿವೆ. ದಾವಣಗೆರೆ ನಗರದ ಆಸ್ಪತ್ರೆಯಲ್ಲಿ ಪ್ರತಿ ನಿಮಿಷಕ್ಕೆ 3000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಜನರೇಟರ್‍ಗಳು ದೊರಕಿವೆ. ಈ ಹಿಂದೆ ದಶಕಗಳೇ ಉರುಳಿದರೂ ಕೆಲವೊಂದು ಸಾಂಕ್ರಾಮಿಕ ರೋಗಳಿಗೆ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಕೇವಲ 8 ತಿಂಗಳಲ್ಲಿ ದೇಶೀಯ ವ್ಯಾಕ್ಸಿನ್‍ಗಳನ್ನು ತಯಾರಿಸಿ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದೆ. ಡಿಸೆಂಬರ್ ಹೊತ್ತಿಗೆ ದೇಶದ ಶೇ. 80 ರಷ್ಟು ಜನ ಲಸಿಕೆಗೆ ಒಳಪಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ, ದೈವಜ್ಞ ಸಮಾಜದ ಎ.ಜಿ.ವಿಠ್ಠಲ್, ಸತ್ಯನಾರಾಯಣ ರಾಯ್ಕರ್, ಉತ್ತರ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ವರ್ಣೇಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.