ಪ್ರತಿ ಹಳ್ಳಿ ಹಳ್ಳಿಗಳಿಗೂ ಕಾನೂನು ಅರಿವು ಕಾರ್ಯ

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವಿನ ಕೊರತೆಯಿದೆ. ಹೀಗಾಗಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಸೋಮವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಏರ್ಪಡಿಸಲಾಗಿದ್ದ ಪ್ಯಾನ್ ಇಂಡಿಯಾ ಅವೇರ್‌ನೆಸ್ ಮತ್ತು ಔಟ್‌ರೀಚ್ ಕಾರ್ಯಕ್ರಮ ಕುರಿತು ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ, ೭೫ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಕಳೆದ ಅ.೦೨ ರಿಂದ ಕಾನೂನು ಅರಿವು ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದ್ದು, ಈ ಕಾರ್ಯಕ್ರಮವು ಜಿಲ್ಲಾಡಳಿತ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಅಭಿಯೋಜನೆ ಇಲಾಖೆ, ದಾವಣಗೆರೆ ಇವರ ಸಹಯೋಗದೊಂದಿಗೆ ನವೆಂಬರ್ ೧೪ ರವರೆಗೂ ಮುಂದುವರೆಯಲಿದೆ. ಗ್ರಾಮೀಣ ಭಾಗದ ಜನರಿಗೆ ಕಾನೂನಿನಲ್ಲಿರುವ ಸೌಲಭ್ಯಗಳ ಮಾಹಿತಿ ಕೊರತೆಯಿದೆ. ಅದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದು, ಕಾನೂನಿನ ಬಗ್ಗೆ ತಿಳುವಳಿಕೆ ಜಾಗೃತಿ ಅತ್ಯವಶ್ಯಕವಾಗಿದೆ ಎಂದರು.

ಎಲ್ಲರಲ್ಲೂ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಕಾನೂನಿನ ಅರಿವು ಮೂಡಿಸುವುದು ಈ ಪ್ಯಾನ್ ಇಂಡಿಯಾ ಅವರೆನೆಸ್ ಮತ್ತು ಔಟ್‌ರೀಚ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಒಟ್ಟು ೮೨೩ ಗ್ರಾಮಗಳಿದ್ದು, ಈಗಾಗಲೇ ಜಿಲ್ಲೆಯಲ್ಲಿ ಅ. ೦೨ ರಿಂದ ಸಾಕಷ್ಟು ಕಾನೂನು ಅರಿವು ಮತ್ತು ನೆರವಿನ ಕಾರ್ಯಕ್ರಮಗಳು ಜರುಗಿದ್ದು, ೮೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಾನೂನು ಮತ್ತು ಸಾರ್ವಜನಿಕರ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮಗಳು ನಡೆದಿವೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ ನಾಯಕ್ ಮಾತನಾಡಿ, ಉಚಿತ ಕಾನೂನು ನೆರವು ಪಡೆಯಲು ೧೯೮೭ ರ ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆ ಕಲಂ ೧೨ ರಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನ್ಯತೆ ಹೊಂದಿರುವವರು ಮಹಿಳೆ ಮತ್ತು ಮಕ್ಕಳು. ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ ತುತ್ತಾದವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು, ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆ ಮುಂತಾದವುಗಳಿಗೆ ಅಭಿರಕ್ಷೆಯಲ್ಲಿರುವವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು, ವಾರ್ಷಿಕ ಆದಾಯ ರೂ ೩ ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದ ಜಾತಿಯ ಜನರು, ಹಾಗೂ ಇತರೆ ಯಾವುದೇ ಪ್ರಸ್ತುತ ಕಾನೂನಿನ ಅಡಿಯಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಲು ಅರ್ಹ ವ್ಯಕ್ತಿಗಳು ಉಚಿತ ಕಾನೂನು ನೆರವು ಪಡೆಯಬಹುದು ಎಂದು ಮಾಹಿತಿ ನೀಡಿದರು.

ಉಚಿತ ಕಾನೂನು ನೆರವು ಮತ್ತು ಸಲಹೆ ಪಡೆಯಲು ಸಮೀಪದ ನ್ಯಾಯಾಲದ ಆವರಣದಲ್ಲಿರುವ ತಾಲ್ಲೂಕು ಕಾನೂನು ಸೇವಾ ಸಮಿತಿಯಲ್ಲಿ ಅಥವಾ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಬಹುದು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರೀ ೧೮೦೦-೪೨೫-೯೦೯೦೦ ಸಂಖ್ಯೆಗೆ ಅಥವಾ ೦೮೦-೨೨೧೧೧೭೩೦ ಗೆ ಕರೆ ಮಾಡಿ ಉಚಿತ ಕಾನೂನು ಸಲಹೆ ಮತ್ತು ನೆರವು ಪಡೆಯಬಹುದು. ಎನ್‌ಎಎಲ್‌ಎಸ್‌ಎ (ನಾಲ್ಸಾ) ಮೊಬೈಲ್ ಆಪ್ ಉಚಿತ ಕಾನೂನು ಸಲಹೆ ಮತ್ತು ನೆರವಿಗಾಗಿ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಅಥವಾ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆಯಬಹುದು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ, ಹಿರಿಯ ಸಹಾಯಕ ಸಾರ್ವಜನಿಕ ಅಭಿಯೋಜಕ ಎ.ಎಂ ಬಸವರಾಜ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!