ಹೆಚ್.ಡಿ.ಕುಮಾರಸ್ವಾಮಿ ಲಾಟರಿ ಸಿಎಂ.! ಎಂ.ಪಿ.ರೇಣುಕಾಚಾರ್ಯ ವ್ಯಂಗ್

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಲಾಟರಿ ಸಿಎಂ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಐಟಿ ಸ್ವತಂತ್ರ ಸಂಸ್ಥೆಯಾಗಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತನ ಮೇಲಿನ ದಾಳಿ ರಾಜಕೀಯ ಪ್ರೇರಿತ ದಾಳಿಯಲ್ಲ. ಐಟಿ ದಾಳಿ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಸರಿಯಲ್ಲ. ಯಡಿಯೂರಪ್ಪಗೂ ಐಟಿ ದಾಳಿಗೂ ಸಂಬಂಧವಿಲ್ಲ. ನನಗಂತೂ ಯಾವ ಐಟಿ ದಾಳಿ ಭಯವೂ ಇಲ್ಲ. ಸಿದ್ದರಾಮಯ್ಯಗೂ ಐಟಿ ದಾಳಿಗೂ ಯಾವುದೇ ಸಂಬಂಧವಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೂ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದವರಲ್ಲ. ಮೊದಲಿಗೆ ಬಿಜೆಪಿಯವರಿಂದ ಎರಡನೇ ಬಾರಿ ಕಾಂಗ್ರೆಸ್ ನವರಿಂದ ಮುಖ್ಯಮಂತ್ರಿಯಾದವರು.ಹತಾಶ ಮನೋಭಾವನೆಯಿಂದ ಅವರು ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ಒಬ್ಬ ಲಾಟರಿ ಸಿಎಂ ಎಂದರು.

ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್ಲೈನ್ ಮಾಡಿಲ್ಲ ಎಂಬುದನ್ನು ಒತ್ತಿ ಹೇಳಿದ ಎಂ.ಪಿ.ರೇಣುಕಾಚಾರ್ಯ, ಯಡಿಯೂರಪ್ಪರ ಪ್ರವಾಸಕ್ಕೆ ಯಾರೂ ಕಡಿವಾಣ ಹಾಕಿಲ್ಲ. ಪಕ್ಷ ಸಂಘಟನೆಗಾಗಿ ಯಡಿಯೂರಪ್ಪ ಪ್ರವಾಸ ಮಾಡಲಿದ್ದು, ಅವರೊಂದಿಗೆ ಪಕ್ಷದ ಎಲ್ಲಾ ಮುಖಂಡರೂ ಸಹ ಭಾಗಿಯಾಗಲಿದ್ದಾರೆ.ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಲಿದ್ದಾರೆ. ಉಪ ಚುನಾವಣೆಯ ನಂತರ ಯಡಿಯೂರಪ್ಪ ತಂಡದ ಜೊತೆ ಪ್ರವಾಸ ಮಾಡಲಿದ್ದಾರೆ. ಯಡಿಯೂರಪ್ಪ ಅವರು ಟೀಂ ಆಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಒಬ್ಬರೇ ಹೋಗಿ ಪ್ರವಾಸ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ.

ಯಡಿಯೂರಪ್ಪರಿಗೆ ಸಮಿತಿಯ ನಿರ್ಧಾರದಂತೆ ಸಭಾಧ್ಯಕ್ಷರು ಸಭಾಪತಿಗಳು ಸೇರಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿದ್ದಾರೆ. ಅಧಿವೇಶನದಲ್ಲಿ ಶಿಸ್ತಿನ ಸಿಪಾಯಿ ಥರ ಯಡಿಯೂರಪ್ಪ ಹಾಜರಾಗಿದ್ದರು. ಯಡಿಯೂರಪ್ಪ ಅವರ ವಿಚಾರವನ್ನೇ ಮಾಧ್ಯಮಗಳು ಪದೇಪದೇ ಎಳೆದು ತರುವುದೂ ಸರಿಯಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದನ್ನು ಸಂಘಟನೆ ತೀರ್ಮಾನ ಮಾಡುತ್ತದೆ. ವೀರಶೈವ ಲಿಂಗಾಯತ,ಒಳ ಪಂಗಡಗಳು ಎಲ್ಲಾ ಒಂದೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Leave a Reply

Your email address will not be published. Required fields are marked *

error: Content is protected !!