ಬಿ ದೇವೇಂದ್ರಪ್ಪನವರ ದಿಟ್ಟ ಹೆಜ್ಜೆ ತೇನಸಿಂಗನ ಸದೃಢ ಹೆಜ್ಜೆಯಾಗಲಿ – ಎನ್ ಟಿ ಎರ್ರಿಸ್ವಾಮಿ

ಬಿ ದೇವೇಂದ್ರಪ್ಪನವರ ದಿಟ್ಟ ಹೆಜ್ಜೆ ತೇನಸಿಂಗನ ಸದೃಢ ಹೆಜ್ಜೆಯಾಗಲಿ - ಎನ್ ಟಿ ಎರ್ರಿಸ್ವಾಮಿ

ದಾವಣಗೆರೆ :ಜೂನ್ ಒಂದರ ಬೆಳಗು ಜಗಳೂರಿನಲ್ಲಿ ಎಂದಿನಂತೆ ಇರಲಿಲ್ಲ. ನಾಲಂದ ಕಾಲೇಜಿನ ಆವರಣದಲ್ಲಿ ಹಸಿರು ತುಂಬಿದ ಗಿಡಮರ, ಕೆಂಪು ಪತ್ತಲ ಉಟ್ಟ ಗುಲ್ ಮೊಹರ್ ಮರಗಳು ರಂಗು ರಂಗಾಗಿ ಕಾಣತೊಡಗಿದ್ದವು ಗಿಡ ಮರಗಳ ನೆರಳಿನಡಿಯಲಿ ತಾಲ್ಲೂಕು, ಜಿಲ್ಲಾಮಟ್ಟದಿಂದ ಆಗಮಿಸಿದ ಪತ್ರಿಕೆ, ದೃಶ್ಯ ಮಾಧ್ಯಮದ ಮಿತ್ರರು ,ಪಟ್ಟಣ- ಹಳ್ಳಿ ಪ್ರದೇಶದಿಂದ ಬಂದ ಅಭಿಮಾನಿ ಜನರ ಜನಜಂಗುಳಿ ಅಲ್ಲಿ ನೆರೆದಿತ್ತು .ಜೊತೆಗೆ ಸಮ ವಸ್ತ್ರದಲ್ಲಿ ಮಿಂಚುತ್ತಿದ್ದ ಕಾಲೇಜಿನ ನೂರಾರು ವಿದ್ಯಾರ್ಥಿಗಳು, ಪಾದರಸದಂತೆ ಚುರುಕಾಗಿ ಚಲನ ಶೀಲವಾಗಿದ್ದ ಅಲ್ಲಿನ ಸಿಬ್ಬಂದಿ ವರ್ಗ, ಪೌರ ಕಾರ್ಮಿಕರು ,ನೌಕರರ ಸಂಘದವರು, ತಾಲೂಕು ದಂಡಾಧಿಕಾರಿಗಳು, ಪಟ್ಟಣ ಪಂಚಾಯಿತಿಯ ಮುಖ್ಯಾದಿ ಕಾರಿ ಹೀಗೆ ಎಲ್ಲ ಸ್ತರದ ಜನರ ದಂಡು ಅಲ್ಲಿ ನೆರೆದು ಅವರೆಲ್ಲರ ಕಣ್ಣು ಯಾವುದೋ ವ್ಯಕ್ತಿಗಾಗಿ ಕಾತರಿಸಿದಂತೆ ಕಂಡಿತು. ಹೌದು ಆ ವ್ಯಕ್ತಿ ಇವರೆಲ್ಲರ ಕಾತುರಕ್ಕೆ ಕಡಿವಾಣ ಹಾಕಿ ನಾಲಂದ ಕಾಲೇಜಿನ ಗೇಟಿನ ಬಳಿ ನಡೆದು ಬಂದರು. ಆಗ ಎಲ್ಲರಲ್ಲೂ ವಿದ್ಯುತ್ ಸಂಚಲನ ಆದ ಅನುಭವ !

ಸರಲಾತಿ ಸರಳವಾಗಿ ಬಂದ ಆ ವ್ಯಕ್ತಿ ಕಾಲೇಜಿನ ಪ್ರಾಚಾರ್ಯರ ಕೊಠಡಿಯ ಬಳಿ ಹೋದರು. ಕೊಠಡಿಯ ಬೀಗ ತೆಗೆದರು. ಕಸಬರಿಗೆ ತೆಗೆದುಕೊಂಡು ಕೋಣೆಯ ಕಸ ಗುಡಿಸಿದರು ಹೊರಗೆ ಬಂದು ವರಾಂಡವನ್ನು ಸ್ವಚ್ಛಗೊಳಿಸಿದರು.ದ್ವಾರ ಬಾಗಿಲಿಗೆ ಬಂದು ದೊಡ್ಡ ಪೊರಕೆ ಕೈಯಲ್ಲಿ ಹಿಡಿದು ಕಸ ಕಡ್ಡಿಗಳನ್ನು ಗುಡಿಸಿ ನೆಲ ಹಸನು ಮಾಡಿದರು. ಕಾಲೇಜಿನ ಒಳಾಂಗಣದಲ್ಲಿ ತೂಗು ಹಾಕಿದ್ದ ಘಂಟೆಯ ಬಳಿ ಬಂದು ಢಣಢಣ ಘಂಟೆ ಬಾರಿಸಿದರು. ಅಲ್ಲಿ ನೆರೆದಿದ್ದ ಎಲ್ಲರೂ ಶಾಲೆಯ ಅಂಗಳಕ್ಕೆ ಬಂದು ಸಾಲಾಗಿ ನಿಂತರು. ಆಗಲ್ಲಿ ರಾಷ್ಟ್ರಗೀತೆಯ ಧುಂದುಬಿ ಮೊಳಗಿತು. ಇದೆಲ್ಲವನ್ನು ತದೇಕ ಚಿತ್ತದಿಂದ ವೀಕ್ಷಿಸಿದ ದೃಶ್ಯ ಮಾಧ್ಯಮದ ಮಂದಿ ಈ ರಸಮಯ ಸನ್ನಿವೇಶಗಳನ್ನು ಎವೆಯಿಕ್ಕದೆ ಕ್ಯಾಮರಗಳಲ್ಲಿ ಕ್ಲಿಕ್ಕಿಸುವಂತಾಯಿತು.

 

ಇದೇನಿದು ? ಇಲ್ಲಿ
ಯಾವುದಾದರೂ ಸಿನಿಮಾ ಶೂಟಿಂಗ್ ನಡೆದಿದೆಯೇ ! ಪ್ರಸಿದ್ಧ ನಟನೇನಾದರೂ ಇಲ್ಲಿ ಬಂದರೆ ? ಎಂದು ನೋಡಿದರೆ ಹಾಗೇನು ಇಲ್ಲ. ಹಾಗಾದರೆ ಇಲ್ಲಿಗೆ ಬಂದ ಆ ವ್ಯಕ್ತಿಯಾದರೂ ಯಾರು ? ಆ ವ್ಯಕ್ತಿ ಬೇರೆ ಯಾರು ಅಲ್ಲ. ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಚಿಕ್ಕಮ್ಮನ ಹಟ್ಟಿಯ ಶ್ರೀ ಬಿ. ದೇವೇಂದ್ರಪ್ಪನವರು.

ದೇವೇಂದ್ರಪ್ಪನವರ ಬದುಕೇ ಒಂದು ಪವಾಡ ಸದೃಶವಾದದ್ದು. ತಂದೆ ತಾಯಿ, ತಾನು ಮತ್ತು ಮಕ್ಕಳು ಹೀಗೆ ಮೂರು ತಲೆಮಾರು ದಶಕಗಳ ಕಾಲ ಬಡತನವನ್ನೇ ಹಾಸು ಹೊದ್ದವರು. ಆದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಛಲ, ಹುರುಪು,ಹುಮ್ಮಸ್ಸು, ನಿಶ್ಚಿತ ಗುರಿ, ಕ್ರಿಯಾಶೀಲತೆ ,ದೃಢ ಸಂಕಲ್ಪ ,ಸದೃಢ ದೇಹ ಮತ್ತು ಮನಸ್ಸು, ಪಟ್ಟು ಹಿಡಿದು ಸಾಧಿಸುವ ಗುಣ ಇವೇ ಮುಂತಾದ ಕಾರಣಗಳಿಂದ ಅವರು ಇಂದು ಸಾಧನೆಯ ಶಿಖರದೆಡೆಗೆ ಸಾಗಿದ್ದಾರೆ .ಬೇರೆಯವರಿಗೆ ಮಾದರಿಯಾಗಿ, ಆಶಾ ಕಿರಣವಾಗಿ,ಸ್ಫೂರ್ತಿಯ ಬೆಳಕಾಗಿ ಕಾಣುತ್ತಿದ್ದಾರೆ .ಮನಸ್ಸಿನಂತೆ ಮಹದೇವ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಬಿ ದೇವೇಂದ್ರಪ್ಪನವರ ದಿಟ್ಟ ಹೆಜ್ಜೆ ತೇನಸಿಂಗನ ಸದೃಢ ಹೆಜ್ಜೆಯಾಗಲಿ - ಎನ್ ಟಿ ಎರ್ರಿಸ್ವಾಮಿ

ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಬರಡು ಹಯನಹುದು ಎನ್ನುವ ಶರಣರ ಮಾತಿನಂತೆ ದೇವೇಂದ್ರಪ್ಪನವರಿಗೆ ಶಿವನೊಲುಮೆ ಮತ್ತು ಗುರು ಕರುಣೆ ಎರಡೂ ಒಲಿದು ಬಂದಿದೆ. ಅವರ ಬದುಕಿನಲ್ಲಿ ಬೆಳಕಾಗಿ ಬಂದವರು ನಾಲಂದ ಕಾಲೇಜಿನ ವಿದ್ಯಾರತ್ನ ಡಾ. ಟಿ. ತಿಪ್ಪೆ ಸ್ವಾಮಿಯವರು.ತಮ್ಮ ಕಾಲೇಜಿನಲ್ಲಿ ದೇವೇಂದ್ರಪ್ಪನವರಿಗೆ ಚಿಕ್ಕದೊಂದು ನೌಕರಿ ಕೊಡುವುದರ ಜೊತೆಗೆ ಶಿವ ಶರಣರ ವಚನಗಳ ಸಾರವನ್ನು ಈತನ ಎದೆಯಲ್ಲಿ ಎರಕ ಹೊಯ್ದರು. ಹಾಗಾಗಿ ಈಗ ದೇವೇಂದ್ರಪ್ಪನವರ ನಡೆ ನುಡಿಗಳಲ್ಲಿ ತನ್ನ ಗುರು ತಿಪ್ಪೇಸ್ವಾಮಿಯವರದೇ ಪಡಿಯಚ್ಚು ಇದ್ದ ಹಾಗೆ.ಆಗ ಮತ್ತು ಈಗ ಇವರ ಕರ್ಮ ಭೂಮಿ ನಾಲಂದದ ನಂದದ ಆವರಣವೇ!

33 ವರ್ಷಗಳ ಕಾಲ ನಾಲಂದದ ಬಯಲಿನಲ್ಲಿ ಸೇವೆ ಸಲ್ಲಿಸಿದ ದೇವೇಂದ್ರಪ್ಪನವರು ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಸಮಾಜ ಸೇವೆಯ ಕಾರ್ಯಕ್ಕೆ ತೊಡಗಿಸಿಕೊಂಡಿದ್ದು ಅವರ ಬದುಕಿನಲ್ಲಿ ಒಂದು ಪರ್ವಕಾಲ. ಸಕಲರಿಗೆ ಲೇಸ ಬಯಸುವವನೇ ಶರಣ ಎನ್ನುವಂತೆ ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಇವರ ಗುಣ ಸ್ವಭಾವದದಿಂದಲೇ ಇವರು ಜಗದ ಊರು ಜಗಳೂರು ಕ್ಷೇತ್ರದ ಜನರ ಮನ ಗೆಲ್ಲುವಂತಾಯಿತು. ಜೊತೆಗೆ ಅದೃಷ್ಟದ ಬಾಗಿಲು ತೆರೆದಂತಾಗಿ ಶಾಸಕರಾಗುವ ಯೋಗಾ ಯೋಗ ಅವರಿಗೆ ಕೂಡಿ ಬಂದಿದೆ.

ದೇವೇಂದ್ರಪ್ಪ ನವರು ಕಾಯಕವೇ ಕೈಲಾಸ ಎಂದು ನಂಬಿ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದವರು ಯಾವ ಕೆಲಸವು ಕೀಳಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟವರು. ಆ ಕಾಯಕದ ಮಹತ್ವವನ್ನು ಎಲ್ಲರೂ ಅರಿಯುವಂತಾಗಲಿ ಎಂಬ ಹಂಬಲದಿಂದಲೇ ಇವರು ಇಂದು ನಾಲಂದದ ಅಂಗಳದಲ್ಲಿ ಮತ್ತೆ ಕಸಗುಡಿಸುವ, ಘಂಟೆ ಬಾರಿಸುವ ಕಾಯಕವನ್ನು ಮಾಡಿ ತೋರಿಸಿದರು . ಹಾಗಾಗಿಯೇ ಇಂದಿನ ಕಾರ್ಯಕ್ಕೆ ಎಂದಿಲ್ಲದ ಮಹತ್ವ ಒದಗಿ ಬಂತು.ಒಂದಂತೂ ನಿಜ, ಇಲ್ಲಿ ಯಾವುದೇ ತೋರಿಕೆ ಇರಲಿಲ್ಲ. ಬದಲಾಗಿ ಭಾವನಾತ್ಮಕ ಅನುಬಂಧ ನೆಲೆಗೊಂಡಿತ್ತು.

ಇದು ಸಾಂಕೇತಿಕವಷ್ಟೇ ಮನುಷ್ಯನ ಬದುಕು ಸಾರ್ಥಕವಾಗುವುದು ಸೇವೆಯಿಂದ .ತಾನು ಶಾಲೆಯ ಅಂಗಳದ ಕಸ ಗುಡಿಸಿದ ಹಾಗೆ ಸಮಾಜದಲ್ಲಿ ತುಂಬಿರುವ ಕಸವನ್ನು ಗುಡಿಸಬೇಕು, ಶಾಲೆಯ ಘಂಟೆ ಬಾರಿಸಿದ ಹಾಗೆ ಅಭಿವೃದ್ಧಿಯ ಚಾಲನೆಯ ಘಂಟೆ ಬಾರಿಸಿ ಜನರನ್ನು ಒಳಿತಿಗಾಗಿ ಒಗ್ಗೂಡಿಸಬೇಕು ಎಂಬ ಪ್ರಬಲ ಹಂಬಲ ದೇವೇಂದ್ರಪ್ಪನವರ ಎದೆಯಲ್ಲಿದೆ . ಹಾಗಾಗಿಯೇ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಇವರು ಕ್ಷೇತ್ರದ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು ಹೀಗೆ !

ಬಿ ದೇವೇಂದ್ರಪ್ಪನವರ ದಿಟ್ಟ ಹೆಜ್ಜೆ ತೇನಸಿಂಗನ ಸದೃಢ ಹೆಜ್ಜೆಯಾಗಲಿ - ಎನ್ ಟಿ ಎರ್ರಿಸ್ವಾಮಿ

ಈ ಸಂದರ್ಭದಲ್ಲಿ ದೇವೇಂದ್ರಪ್ಪನವರು ಆಡಿದ ಮಾತುಗಳು ಬಹಳ ಮಾರ್ಮಿಕವಾಗಿದ್ದವು ನಾನು ಯಾವುದೇ ದ್ವೇಷ ಅಸೂಯೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಒಳ್ಳೆಯದನ್ನು ಎಲ್ಲರಿಂದಲೂ ಸ್ವೀಕಾರ ಮಾಡುತ್ತೇನೆ.ಗುರು ಹಿರಿಯರನ್ನು ಗೌರವಿಸುತ್ತೇನೆ. ನಾನು ನನಗೆ ಮತ ಹಾಕಿದ ಮತದಾರರಿಗೆ ಮಾತ್ರವಲ್ಲ ಬದಲಾಗಿ ಕ್ಷೇತ್ರದ ಎಲ್ಲ ಮತದಾರರ ಶಾಸಕನಾಗಿ ಕೆಲಸ ಮಾಡುವೆ. ಶಿಕ್ಷಣದ ಮಹತ್ವ ನನಗೆ ತಿಳಿದಿದೆ. ನನ್ನ ಮಕ್ಕಳು ಕಷ್ಟಪಟ್ಟು ಓದಿದ ಕಾರಣವಾಗಿಯೂ ನಾನು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಹಾಗಾಗಿ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುವೆ. ಕಾಯಕದ ಮಹತ್ವವನ್ನು ಜನರಿಗೆ ತಿಳಿಸುವೆ ಕಾರ್ಮಿಕರ,ಬಡವರ,ರೈತರ ಮಹಿಳೆಯರ, ಕಾಯಕ ಜೀವಿಗಳ, ಬದುಕು ಹಸನ ಮಾಡಲು ವಿಶೇಷ ಆದ್ಯತೆ ನೀಡುತ್ತೇನೆ.ಎನ್ನುವಂತಹ ಮಾತುಗಳು ಅರ್ಥಪೂರ್ಣ ವಾಗಿದ್ದವು.

ದೇವೇಂದ್ರಪ್ಪನವರ ಆಶಯ ಮತ್ತು ಸಂಕಲ್ಪಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.. ಇವರ ಮೊದಲ ಹೆಜ್ಜೆ ಸರಿಯಾಗಿಯೇ ಇದೆ. ಎವರೆಸ್ಟ್ ಶಿಖರದ ಬುಡದಲ್ಲಿ ನಿಂತು ಹೆಜ್ಜೆಗೆ ಹೆಜ್ಜೆ ಸೇರಿ ಇವರ ಪಯಣ ಸಾಗಿದೆ. ಹಾದಿಯಲ್ಲಿ ಕಲ್ಲು , ಮುಳ್ಳು, ಕೆಸರು ,ಕೊರಕಲು, ಕಂದಕಗಳು ಅಡ್ಡ ಬರುವುದು ಸಹಜ. ಅವೆಲ್ಲವನ್ನು ಸಾಂಗವಾಗಿ ದಾಟಿಕೊಂಡು ಇವರು ಕ್ಷೇತ್ರದ ಅಭಿವೃದ್ಧಿಯ ಶಿಖರದ ತುತ್ತ ತುದಿಯನ್ನು ಏರುವಂತಾಗಲಿ. ನೆನಪಿರಲಿ, ಸಾವಿರ ಹೆಜ್ಜೆಗಳ ಸರದಾರ ತೇನಸಿಂಗನನ್ನು ಇಂದು ಜಗತ್ತು ಕೊಂಡಾಡುವುದು ಆತನ ಸಾಹಸದ ಕೆಲಸಕ್ಕಾಗಿ. ಹಾಗೆಯೇ ನೀವು ಕೈಗೊಳ್ಳಲಿರುವ ಅಭಿವೃದ್ಧಿಯ ಕೆಲಸಗಳ ಕಾರಣವಾಗಿ ಮುಂದೊಂದು ದಿನ ಜಗಳೂರು ಕ್ಷೇತ್ರದ ಜನತೆ ನಿಮ್ಮನ್ನು ಕೊಂಡಾಡುವಂತಾಗಲಿ ಎಂದು ಶುಭ ಹಾರೈಸುವೆ.

ಎನ್ ಟಿ. ಎರ್ರಿ ಸ್ವಾಮಿ
ಲೇಖಕ ಹಾಗೂ ಲೀಡ್ ಬ್ಯಾಂಕಿನ
ವಿಶ್ರಾಂತ ವಿಭಾಗೀಯ ವ್ಯವಸ್ಥಾಪಕ. ಜಗಳೂರು.

Leave a Reply

Your email address will not be published. Required fields are marked *

error: Content is protected !!