Lingayat: ಒಬ್ಬರ ತಲೆ ಮೇಲೆ ಒಬ್ಬರು ಕೂರುವ ವ್ಯವಸ್ಥೆ ಅಳಿಸಿ: ಸಿದ್ದರಾಮಯ್ಯ ಕರೆ

ಮೈಸೂರು, ಅ.೦9: ಅಖಿಲ ಭಾರತ ವೀರಶೈವ ಲಿಂಗಾಯತ (Lingayat) ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಮೈಸೂರಿನ ಬಸವ ಬಳಗಗಳ ಒಕ್ಕೂಟ ಮೈಸೂರು ಕಲಾಮಂದಿರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ, ಒಬ್ಬರ ತಲೆ ಮೇಲೆ ಒಬ್ಬರು ಕೂರುವ ವ್ಯವಸ್ಥೆ ಅಳಿಸಿ, ಒಬ್ಬರ ಪಕ್ಕ ಒಬ್ಬರು ಕೂರುವ ಸಮಾಜ ನಿರ್ಮಾಣ ಬಸವಾದಿ ಶರಣರ ಆಶಯವಾಗಿತ್ತು. ಇದು ನನ್ನ ಆಶಯವೂ ಹೌದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಬಸವಾದಿ ಶರಣರು ಮೇಲ್ವರ್ಗದವರ ಪರವಾಗಿ ಕೆಲಸ ಮಾಡಲಿಲ್ಲ. ಶೂದ್ರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದರು. ತಳ ಸಮುದಾಯದ ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಜಾರಿಗೆ ತಂದವರು ಬಸವಾದಿ ಶರಣರು. ಆ ಕಾಲದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿದವರು ಬಸವಣ್ಣ. ಈ ಕಾರಣಕ್ಕೇ ಬಸವಣ್ಣನವರ ವಿರುದ್ಧ ಬಿಜ್ಜಳನನ್ನು ಎತ್ತಿಕಟ್ಟಿದರು ಎಂದು ವಿವರಿಸಿದರು.

drought; ರೈತರ ಜಮೀನಿನಲ್ಲಿ ಬರ ಅಧ್ಯಯನ ಅಧಿಕಾರಿಗಳಿಂದ ಬರ, ಬೆಳೆ ವೀಕ್ಷಣೆ

12ನೇ ಶತಮಾನದ ಶರಣರ ಆಶಯಗಳು ಇನ್ನೂ ಈಡೇರಿಲ್ಲ. ಸ್ವಾತಂತ್ರ್ಯ ಬಂದು 76 ವರ್ಷಗಳ ನಂತರವೂ ಪ್ರಜಾಪ್ರಭುತ್ವದ, ಸಂವಿಧಾನದ ಆಶಯಗಳು ಈಡೇರಿಲ್ಲ. ಅಸಮಾನತೆ ಹೋಗಿಲ್ಲ. ಈ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಜಾರಿ ಸಂದರ್ಭದಲ್ಲೇ ಎಚ್ಚರಿಸಿದ್ದರು. ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನೇ 12ನೇ ಶತಮಾನದಲ್ಲೇ ಬಸವಣ್ಣ ಮತ್ತು ಬಸವಾದಿ ಶರಣರು ಕೊಟ್ಟಿದ್ದರು ಎಂದು ನುಡಿದರು.

ಜನರ ಭಾಷೆಯಲ್ಲೇ ಸಾಹಿತ್ಯ ರಚಿಸಿದ್ದು ಬಸವಾದಿ ಶರಣರು ಮಾಡಿದ ಬಹಳ ದೊಡ್ಡ ಕ್ರಾಂತಿ. ಸಂಸ್ಕೃತದಲ್ಲಿ ಸಾಹಿತ್ಯ ರಚಿಸಿದರೆ ಜನರಿಗೆ ಅರ್ಥ ಆಗುತ್ತದಾ? ಯಾರಿಗೂ ಅರ್ಥ ಆಗುವುದಿಲ್ಲ ಎನ್ನುವ ಕಾರಣಕ್ಕೇ ಜನರ ಭಾಷೆಯಲ್ಲಿ ಅತ್ಯುನ್ನತ ಕನ್ನಡದಲ್ಲಿ ಶರಣ ಸಾಹಿತ್ಯ ರಚನೆಯಾಯಿತು ಎಂದರು.

ಬಸವಾದಿ ಶರಣರು 12ನೇ ಶತಮಾನದಲ್ಲೇ ಜಡ್ಡುಗಟ್ಟಿದ ಜಾತಿ ಸಮಾಜಕ್ಕೆ ಚಲನೆ ನೀಡಿದರು. ಜಾತಿ ರಹಿತ ಸಮಾಜ, ಮೌಡ್ಯಗಳನ್ನು ಕಿತ್ತೆಸೆದು ಕಂದಾಚಾರಗಳಿಲ್ಲದ ಸಮಾಜ ನಿರ್ಮಾಣಕ್ಕೆ ಮುಂದಾದರು.

ಸಮಾಜ ಜಾತಿ ಆಧಾರದಲ್ಲಿ ವಿಭಜನೆ ಆಗಬಾರದು. ಕುವೆಂಪು ಅವರು, “ಹುಟ್ಟುತ್ತಾ ಎಲ್ಲರೂ ವಿಶ್ವ ಮಾನವರು. ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ” ಎಂದಿದ್ದರು. ನಾವು ಹಾಗಾಗಬಾರದು. ಶ್ರೇಣೀಕೃತ ಸಮಾಜ ಹೋಗಬೇಕು. ಸಮನಾಂತರ ಸಮಾಜ ಬರಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಎಂದರು.

caste survey; ಜಾತಿ ಸಮೀಕ್ಷೆ ಸಮಾಜವನ್ನು ವಿಭಜಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವೀರಶೈವ-ಲಿಂಗಾಯತ ಸಮುದಾಯ ಈ ಕಾರ್ಯಕ್ರಮದಲ್ಲಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಂದಿನ ಬಜೆಟ್ ನಲ್ಲಿ ಗಣನೀಯವಾಗಿ ಪರಿಗಣಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಣ್ಯ ಮತ್ತು ಪರಿಸರ ಸಚಿವ ಬಿ.ಈಶ್ವರ ಖಂಡ್ರೆ ಅವರು ವಹಿಸಿದ್ದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರು “12ನೇ ಶತಮಾನದ ಶರಣ ದಂಪತಿಗಳು” ಕೃತಿಯನ್ನು ಬಿಡುಗಡೆ ಮಾಡಿದರು. ಬಸವೇಶ್ವರ ಪುತ್ಥಳಿ ದಾನ ಮಾಡಿದ ನೈಸ್ ಸಂಸ್ಥೆಯ ಮುಖ್ಯಸ್ಥರಾದ ಅಶೋಕ್ ಖೇಣಿ, ಶಾಸಕರುಗಳಾದ ಮಾಜಿ ಸಚಿವ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ದೃವನಾರಾಯಣ್, ಜಿ.ಡಿ.ಹರೀಶ್ ಗೌಡ, ಹೆಚ್.ಎಂ.ಗಣೇಶ್ ಪ್ರಸಾದ್, ಟಿ.ಎಸ್.ಶ್ರೀವತ್ಸ, ವೊಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ.ತಿಮ್ಮಯ್ಯ ಸೇರಿ ಮಾಜಿ ಶಾಸಕರು ಹಾಗೂ ನಾಯಕರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!