Lingayat; ಲಿಂಗದೀಕ್ಷೆಯಲ್ಲಿ ಜಾತಿ ಭೇದವಿಲ್ಲ: ಶ್ರೀಶೈಲ ಜಗದ್ಗುರುಗಳು
ಶ್ರೀಶೈಲಂ, ಆ.25: ವೀರಶೈವ ಲಿಂಗಾಯತ (Lingayat) ಧರ್ಮದಲ್ಲಿ ಶ್ರೀ ಗುರುವು ಶಿಷ್ಯನಿಗೆ ದಯಪಾಲಿಸುವ ಇಷ್ಟಲಿಂಗ ದೀಕ್ಷೆಯ ಪವಿತ್ರ ಸಂಸ್ಕಾರದಲ್ಲಿ ಜಾತಿ ಭೇದವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಶ್ರೀಶೈಲದ ಶ್ರೀ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಜರುಗಿದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ಈ ವಿಚಾರವನ್ನು ತಿಳಿಸಿದರು.
ಪರವಾನಗಿ ಪಡೆಯದೇ ಚೀಟಿ ನಡೆಸುವ ಸಂಸ್ಥೆಗಳ ವಿರುದ್ದ ಕಾನೂನು ಕ್ರಮ – ಹೆಚ್.ಅನ್ನಪೂರ್ಣ
ಮನುಷ್ಯನಿಗೆ ಅನಾದಿಕಾಲದಿಂದ ಆಣವ ಮಾಯಿಯ ಮತ್ತು ಕಾರ್ಮಿಕ ಎಂಬ ಮೂರು ಪ್ರಕಾರದ ಮಲಗಳು ಆವರಿಸಿರುತ್ತವೆ. ಈ ಮಲಗಳೇ ಮನುಷ್ಯನ ಸಾಂಸಾರಿಕ ಎಲ್ಲ ದುಃಖಗಳಿಗೆ ಮತ್ತು ಭವಬಂಧನಕ್ಕೆ ಕಾರಣವಾಗಿರುತ್ತವೆ. ಶ್ರೀಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇದಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ತಿರೋಹಿತಗೊಳಿಸುತ್ತಾನೆ. ಈ ಸಂದರ್ಭದಲ್ಲಿ ಕ್ರಿಯಾದೀಕ್ಷೆಯಿಂದ ಕಾರ್ಮಿಕ ಮಲದ, ಮಂತ್ರ ದೀಕ್ಷೆಯಿಂದ ಮಾಯೀಯ ಮಲದ ಮತ್ತು ವೇದಾ ದೀಕ್ಷೆಯಿಂದ ಆಣವ ಮಲದ ನಿವೃತ್ತಿಯಾಗುತ್ತದೆ. ದೀಕ್ಷೆಯಲ್ಲಿ ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ಅದನ್ನು ತಪ್ಪದೆ ಪೂಜಿಸಬೇಕೆಂದು ಆದೇಶಿಸುತ್ತಾನೆ. ಈ ಲಿಂಗವನ್ನು ಜಾತಿ, ವರ್ಣ, ವರ್ಗ ಮೊದಲಾದ ಯಾವುದೇ ಭೇದವಿಲ್ಲದೇ, ಕೇವಲ ಶಕ್ತಿಪಾತ ಮತ್ತು ಸದ್ಗುಣ ಸದಾಚಾರಗಳ ಆಧಾರದ ಮೇಲೆ ಸರ್ವರಿಗೂ ನೀಡಲಾಗುತ್ತದೆ. ಇದನ್ನು ಪಡೆದ ಬಳಿಕ ಸದಾಚಾರ ಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದ ಲಿಂಗಪೂಜಾ ಮಹಾವ್ರತವನ್ನು ಪರಿಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡೆಯುತ್ತಾನೆ ಎಂಬುದಾಗಿ ವಿವರಿಸಿದರು.
ಜೈನಾಪುರದ ರೇಣುಕ ಶಿವಾಚಾರ್ಯ ಸ್ವಾಮಿಗಳು ದೀಕ್ಷಾರ್ಥಿಗಳಿಗೆ ಮತ್ತು ವಟುಗಳಿಗೆ ಲಿಂಗದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡಿದರು. 250 ಕ್ಕೂ ಅಧಿಕ ಜಂಗಮ ವಟುಗಳು ಅಯ್ಯಾಚಾರವನ್ನು ಮತ್ತು ಅನೇಕ ಭಕ್ತರು ಲಿಂಗದೀಕ್ಷೆಯನ್ನು ಪಡೆದುಕೊಂಡರು.